ಹೆತ್ತಮ್ಮನನ್ನೇ ಕತ್ತಿಯಿಂದ ಕಡಿದು ಕೊಂದ ಮಗ

ಹೆತ್ತಮ್ಮನನ್ನೇ ಕತ್ತಿಯಿಂದ ಕಡಿದು ಕೊಂದ ಮಗ

ಶಿವಮೊಗ್ಗ,ಆ.28 :ಭದ್ರಾವತಿ ತಾಲೂಕು  ಮಾವಿನಕೆರೆ ಗ್ರಾಮದ ನಿವಾಸಿ ಸುಲೋಚನಮ್ಮ (60 ) ಎಂಬವರನ್ನು ಅವರ ಪುತ್ರನೇ ಕೊಂದು ಹಾಕಿರುವ ಘಟನೆ ಸಂಭವಿಸಿದೆ.

 ಸಂತೋಷ (40) ತಾಯಿಯನ್ನು ಕೊಂದವನು. ಭಾನುವಾರ ರಾತ್ರಿಯೇ ಕೊಲೆ ಮಾಡಿರುವ ಶಂಕೆ ಇದ್ದು, ಸೋಮವಾರ ಮಧ್ಯಾಹ್ನವಷ್ಟೇ ಪ್ರಕರಣ ಬೆಳಕಿಗೆ ಬಂದಿದೆ.

ಸಂತೋಷ್ ಕೆಲವು ವರ್ಷಗಳ ಹಿಂದೆ ಮದುವೆಯಾಗಿ ಎರಡು ಮಕ್ಕಳನ್ನು ಹೊಂದಿದ್ದಾನೆ. ಚಾಲಕನಾಗಿ ಕೆಲಸ ಮಾಡುತ್ತಾನೆ, ಕೂಲಿ ಕೆಲಸವನ್ನೂ ಮಾಡುತ್ತಾನೆ. ಆದರೆ, ಒಂದು ಪೈಸೆಯನ್ನೂ ಮನೆಗೆ ತರುವ ಜಾಯಮಾನವಿಲ್ಲ. ಕುಡಿದು ಮತ್ತೇರಿಸಿಕೊಂಡು ಮನೆಗೆ ಬರುವ ಆತ ಹೆಂಡತಿ ಮಕ್ಕಳ ಮೇಲೆ ತನ್ನ ಪ್ರತಾಪ ತೋರಿಸುತ್ತಿದ್ದ.

ಈತನ ದೈಹಿಕ ಮತ್ತು ಮಾನಸಿಕ ಹಿಂಸೆಯಿಂದ ಬೇಸತ್ತ ಆತನ ಹೆಂಡತಿ, ಇಬ್ಬರು ಮಕ್ಕಳನ್ನು ಕಟ್ಟಿಕೊಂಡು ಎಂ.ಸಿ.ಹಳ್ಳಿಯಲ್ಲಿ ಬೇರೆ ಮನೆ ಮಾಡಿಕೊಂಡು ವಾಸಿಸುತ್ತಿದ್ದಾಳೆ. ಈತ ಆಗಾಗ ಅಲ್ಲಿಗೂ ಹೋಗಿ ಕಿರಿಕಿರಿ ಮಾಡುತ್ತಿದ್ದಾನೆ.

ಮಾವಿನಕೆರೆಯ ಮನೆಯಲ್ಲಿ ಸಂತೋಷ್ ಮತ್ತು ಅವನ ತಾಯಿ ವಾಸಿಸುತ್ತಾರೆ. ಅವನು ತಾಯಿಯ ಜತೆಗೂ ಚೆನ್ನಾಗಿ ಇರಲಿಲ್ಲ. ಪ್ರತಿದಿನವೂ ಬಂದು ತಾಯಿಯ ಜತೆ ಗಲಾಟೆ ಮಾಡುತ್ತಿದ್ದ.  ಮನೆಗೆ ಒಂದು ಪೈಸೆಯೂ ಕೊಟ್ಟದ್ದಿಲ್ಲ.  ಅಮ್ಮನಿಗಾಗಿ ಅನ್ನಾಹಾರಕ್ಕೂ ಕೊಡುತ್ತಿರಲಿಲ್ಲ. ಅಕ್ಕಪಕ್ಕದ ಮನೆಯವರೇ ಸಂತೋಷ್ ತಾಯಿಗೆ ಊಟ ತಿಂಡಿ ಕೊಡುತ್ತಿದ್ದರು. ಊರವರ ಸಹಾಯದಿಂದಲೇ ಜೀವನ ಸಾಗಿಸುತ್ತಿದ್ದರು ಸುಲೋಚನಮ್ಮ.

ಸೋಮವಾರ   ಸುಲೋಚನಮ್ಮ ಮಧ್ಯಾಹ್ನ ವಾದರೂ ಮನೆಯಿಂದ  ಹೊರಗೆ ಬಾರದೆ ಇರುವುದನ್ನು ನೋಡಿ ಪಕ್ಕದ ಮನೆಯ ಮಹಿಳೆಯೊಬ್ಬರು ಮನೆ ಪಕ್ಕ ಬಂದು ಕರೆದಿದ್ದಾರೆ. ಆದರೆ ಒಳಗಿನಿಂದ ಯಾವುದೇ ಉತ್ತರ ಬಂದಿಲ್ಲ. ಬಳಿಕ ಅವರು ತೆರೆದ ಕಿಟಕಿಯಿಂದ ಒಳಗೆ ನೋಡಿದ್ದಾರೆ. ಆಗ ಸುಲೋಚನಮ್ಮ ಮಂಚದಲ್ಲಿ ಮಲಗಿದ್ದು ಕಂಡುಬಂತು. ಕೂಡಲೇ ಅಕ್ಕಪಕ್ಕದ ಮನೆ ಯವರನ್ನು ಕರೆದುಕೊಂಡು ಬಂದು ನೋಡಿದಾಗ ಸಾವು ಸಂಭವಿಸಿತ್ತು.ಪಕ್ಕದಲ್ಲೇ ಇದ್ದ ಕತ್ತಿ ಆಕೆಯನ್ನು ಕೊಲೆ ಮಾಡಿ ದ್ದಕ್ಕೆ ಸಾಕ್ಷಿ ನುಡಿದಿತ್ತು. ಇಷ್ಟಾ ಗುವಾಗ ಎಲ್ಲರ ಸಂಶಯ ಆಕೆಯ ಮಗ ಸಂತೋಷನ ಮೇಲೆ ಬಿದ್ದಿತ್ತು. ಆತನನ್ನು ಹುಡುಕಿಕೊಂಡು ಹೋದರೆ ಆತ ಗದ್ದೆಯೊಂದರಲ್ಲಿ ಆರಾಮವಾಗಿ ಮಲಗಿದ್ದ. ಆಗಲೂ ಅವನು ಕುಡಿತದ ಮತ್ತಿನಲ್ಲೇ ಇದ್ದ.

ಆತನನ್ನು ಊರಿನ ಜನ ಸೇರಿ ಕರೆದುಕೊಂಡು ಮನೆಗೆ ಬಂದರೆ ಆತ ತಾಯಿಯನ್ನು ನೋಡಿದಂತೆ ಮಾಡಿ ಮಾರ್ಗದ ಪಕ್ಕದಲ್ಲಿ ಇಟ್ಟಿದ್ದ ಇಟ್ಟಿಗೆಯ ರಾಶಿ ಪಕ್ಕ ಬಿದ್ದುಕೊಂಡಿದ್ದಾನೆ. 

ಪೊಲೀಸ್ ವಿಚಾರಣೆ ವೇಳೆ , ನನಗೆ ವಿಷಯವೇ ಗೊತ್ತಿಲ್ಲ, ರಾತ್ರಿ ನಾನು ಮನೆಗೆ ಬಂದಿಲ್ಲ. ಗದ್ದೆಯಲ್ಲೇ ಮಲಗಿದ್ದೆ. ಈಗ ಬಂದು ಯಾರೋ ಹೇಳಿದರು. ಹೀಗಾಗಿ ಮನೆಗೆ ಬಂದೆ ಎಂದು ಹೇಳಿದ್ದಾನೆ. ನನಗೂ ಕೊಲೆಗೂ ಸಂಬಂಧವಿಲ್ಲ ಎನ್ನುತ್ತಿದ್ದಾನೆ. ಭದ್ರಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ.