ಸಣ್ಣ ಸಮಾಜಗಳು ಸಂಘಟನೆಯಿಂದ ಆರ್ಥಿಕವಾಗಿ ಸದೃಢವಾಗಬೇಕು:ಎನ್.ಎಸ್ ಚಂದ್ರಪ್ಪ

ಭಗೀರಥ ಉಪ್ಪಾರ ಸಹಕಾರ ಸಂಘದ ಕಾರ್ಯಾಲಯ ಆರಂಭ

ಸಣ್ಣ ಸಮಾಜಗಳು ಸಂಘಟನೆಯಿಂದ ಆರ್ಥಿಕವಾಗಿ ಸದೃಢವಾಗಬೇಕು:ಎನ್.ಎಸ್ ಚಂದ್ರಪ್ಪ

ಶಿವಮೊಗ್ಗ,ಸೆ.10: ಅತೀ ಹಿಂದುಳಿದ ಹಾಗೂ ಸಣ್ಣಪುಟ್ಟ ಸಮುದಾಯಗಳು ಸಂಘಟನೆಯಾಗುವ ಮೂಲಕ ಆರ್ಥಿಕವಾಗಿಯೂ ಸದೃಢವಾಗಬೇಕು ಎಂದು ಕರ್ನಾಟಕ ರಾಜ್ಯ ಉಪ್ಪಾರ ನೌಕರರ ಸಂಘದ ರಾಜ್ಯಾಧ್ಯಕ್ಷ ಎನ್.ಎಸ್ ಚಂದ್ರಪ್ಪ ದಾವಣಗೆರೆ ಹೇಳಿದರು.

ಶಿವಮೊಗ್ಗ ಜಿಲ್ಲಾ ಶ್ರೀ ಭಗೀರಥ ಸಹಕಾರ ಸಂಘದ ಕಚೇರಿಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. ಸಂಘಟನೆ ಕೊರತೆಯಿಂದ ನಮ್ಮ ಸಮುದಾಯ ಹಿಂದೆ ಬಿದ್ದಿದೆ. ಶಿವಮೊಗ್ಗ ಜಿಲ್ಲೆ ಪ್ರಜ್ಞಾವಂತರ ಜಿಲ್ಲೆಯಾಗಿದೆ. ಇಲ್ಲಿರುವ ಉಪ್ಪಾರ ಸಮುದಾಯದವರು ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಉಳಿದ ಜಿಲ್ಲೆಗಿಂತ ಮುಂದೆ ಇದ್ದಾರೆ. ಆದರೆ ಸಂಘಟನಾತ್ಮಕವಾಗಿ ಇನ್ನೂ ಮುಂದೆ ಬರಬೇಕಿದೆ. ಶ್ರೀಭಗೀರಥ ಸಹಕಾರ ಸಂಘ ಆರಂಭವಾಗಿರುವುದು ಹೊಸ ಶಖೆಗೆ ಮುನ್ನುಡಿ ಬರೆದಿದೆ ಇಡೀ ಸಮಾಜ ಈ ಸಂಘಟನೆಯ ಹೆಸರಲ್ಲಿ ಒಂದಾಗಬೇಕಿದೆ ಎಂದರು.

ಸಣ್ಣಪುಟ್ಟ ಸಮುದಾಯಗಳ ಜನರು ತಾವು ಪ್ರತಿನಿಧಿಸುವ ಇಲಾಖೆಗಳಲ್ಲಿ ಕೆಲಸ ಮಾಡುವಾಗ ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ಸಂಘಟನೆಯಿಂದ ಇಂತಹ ಶೋಷಣೆಯಿಂದ ಮುಕ್ತಿಪಡೆಯಬಹುದು. ಸಮಾಜದ ವಿದ್ಯಾವಂತರು ಸಮಾಜದ ಬಡವರು ಮತ್ತು ಶೋಷಿತರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಬೇಕು. ಈ ನೆಲೆಯಲ್ಲಿ ನಮ್ಮ ಸಂಘಟನೆಗಳು ಪ್ರೋತ್ಸಾಹ ನೀಡಬೇಕೆಂದು ಹೇಳಿದರು.

ಸಹಕಾರ ಸಂಘದ ಅಧ್ಯಕ್ಷ ಎನ್.ಮಂಜುನಾಥ್ ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿ ಶ್ರೀಭಗೀರಥ ಸಹಕಾರ ಸಂಘ ಆರಂಭವಾಗಿರುವುದು ರಾಜ್ಯದಲ್ಲಿಯೇ ಮಾದರಿ ಕೆಲಸವಾಗಿದೆ. ಇಡೀ ಜಿಲ್ಲೆಯನ್ನು ಒಳಗೊಂಡ ಈ ಸಹಕಾರ ಸಂಘವನ್ನು ಮುಂದಿನ ಐದು ವರ್ಷಗಳಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ಧಿಪಡಿಸುವ ಉದ್ದೇಶ ಹೊಂದಲಾಗಿದೆ.

 ಜಿಲ್ಲೆಯಲ್ಲಿರುವ ಉಪ್ಪಾರ ಸಮಾಜ ಬಂಧುಗಳು ಸಹಕಾರ ಸಂಘದ ವ್ಯಾಪ್ತಿಗೆ ಒಳಪಡಬೇಕಿದೆ. ಸಹಕಾರ ಸಂಘದಿಂದ ಸಮಾಜದ ಪ್ರತೀ ಷೇರುದಾರರ ಆರ್ಥಿಕ ಮಟ್ಟ ಸುಧಾರಣೆಯಾಗಲಿವೆ ಎಂಬ ಭರವಸೆ ಇದೆ ಎಂದರು.

ಸಹಕಾರ ಸಂಘದ ತಾತ್ಕಾಲಿಕ ಕಚೇರಿಯನ್ನು ಶಿವಮೊಗ್ಗ ವಾರ್ತಾ ಇಲಾಖೆ ಆವರಣದಲ್ಲಿದಲ್ಲಿನ ಡಿ.ದರ್ಜೆ ನೌಕರರ ಭವನದಲ್ಲಿ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಸಹಕಾರ ಸಂಘದ  ಅಧಿಕೃತ ಉದ್ಘಾಟನೆ, ಷೇರುಪತ್ರ ವಿತರಣೆ ಕಾರ್ಯಕ್ರಮವನ್ನು ದೊಡ್ಡಮಟ್ಟದಲ್ಲಿ ಆಯೋಜಿಸಲಾಗುವುದು. ಈ ಸಹಕಾರ ಸಂಘದ ಬೆಳವಣಿಗೆಗೆ ಜಿಲ್ಲೆಯ ಎಲ್ಲಾ ಉಪ್ಪಾರ ಬಂಧುಗಳ ಸಹಕಾರ ಅಗತ್ಯವಿದ್ದು, ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದರು.

ಖಜಾನೆ ಇಲಾಖೆ ಚಿಕ್ಕಬಳ್ಳಾಪುರ ಜಿಲ್ಲಾ ಉಪನಿರ್ದೇಶಕ ಅಶೋಕ್, ಸಹಕಾರ ಸಂಘದ ನಿರ್ದೇಶಕರಾದ ಎಂ.ಜಿ.ಕೆ ಹನುಮಂತಪ್ಪ,ಶ್ರೀನಿವಾಸ್ ಮಾತನಾಡಿದರು ಸಂಘದ ಉಪಾಧ್ಯಕ್ಷ ವಸಂತ ಹೋಬಳಿದಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಡಿವೈಎಸ್ಪಿ ಗಳಾದ  ನಿತ್ಯಾನಂದ ಎಂ.ಮಾಳದೇವರು ಶುಭಾಕೋರಿದರು.

ಯು.ಕೆ.ವೆಂಕಟೇಶ್ ಸ್ವಾಗತಿಸಿದರು. ಜಿ. ಚಿದಾನಂದ್, ರವಿ ಹಾರ್‍ನಹಳ್ಳಿ, ಯು.ಕೆ.ರಮೇಶ್,ಸುಧಾಕರ್ ಎಸ್.ಪಿ,ಕೆ.ಶ್ರೀನಿವಾಸ್, ಚಂದ್ರಶೇಖರ್ ಕಾಶಿಪುರ, ಸಾಗರದ ರವಿ, ಶ್ರೀಮತಿ ಅರ್ಚನಾ, ಕಿರಣ್‌ಕುಮಾರ್ ಎಸ್.ಈ ,ಸಾಹಿತಿ ಸುರೇಶ್ ಮಲ್ನಾಡ್, ರಾಮಪ್ಪ ಪ್ರಧಾನ ಕಾರ್ಯದರ್ಶಿ, ದಯಾನಂದ್ ಉಗಾಂಡ ಸೇರಿದಂತೆ ಸಮಾಜ ಮುಖಂಡರು ಈ ಸಂದರ್ಭ ಉಪಸ್ಥಿತರಿದ್ದರು.