ಅರಳಸುರಳಿ ಆತ್ಮಹತ್ಯೆ ಪ್ರಕರಣಕ್ಕೆ ತಿರುವು

ಮೆಗ್ಗಾನ್ ವೈದ್ಯ ಸೇರಿದಂತೆ ಮೂವರ ಮೇಲೆ ಎಫ್ ಐಆರ್

ಅರಳಸುರಳಿ ಆತ್ಮಹತ್ಯೆ ಪ್ರಕರಣಕ್ಕೆ ತಿರುವು

ಶಿವಮೊಗ್ಗ,ಅ.19 :  ತೀರ್ಥಹಳ್ಳಿ ತಾಲೂಕಿನ ಅರಳಸುರಳಿಯ ಬ್ರಾಹ್ಮಣ  ಕುಟುಂಬದ ನಾಲ್ವರ ಸಜೀವ ದಹನದ ಕುರಿತಂತೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

ಅ. 8 ರಂದು ರಾಘವೇಂದ್ರ ಕೇಕುಡ, ಪತ್ನಿ ನಾಗರತ್ನ, ಮಕ್ಕಳಾದ ಶ್ರೀರಾಮ್  ಮತ್ತು ಭರತ್ ಮನೆಯ ಕೊಠಡಿಯೊಂದರಲ್ಲಿ ಕಟ್ಟಿಗೆ ಜೋಡಿಸಿಕೊಂಡು ಸಜೀವ ದಹನ ಮಾಡಿಕೊಂಡಿದ್ದರು. ಈ ಘಟನೆಯಲ್ಲಿ ರಾಘವೇಂದ್ರ ಕೇಕುಡ, ನಾಗರತ್ನ ಹಾಗೂ ಶ್ರೀರಾಮ್ ಸಾವನ್ನಪ್ಪಿದ್ದರು. ಎರಡು ದಿನಗಳ ಬಳಿಕ ಗಾಯಗೊಂಡಿದ್ದ ಭರತ್ ಸಹ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದನು.

ಭರತ್ ಸಾವನ್ನಪ್ಪುವವರೆಗೂ ಪ್ರಕರಣವನ್ನ ಯುಡಿಆರ್  ದಾಖಲಾಗಿತ್ತು ಎಂದು ಭಾವಿಸಲಾಗಿತ್ತು. ಆದರೆ ಭರತ್ ಸಾವಿನ ನಂತರ ಮೃತ ನಾಗರತ್ನ ಅವರ ಸಹೋದರ ನೀಡಿದ ಹೇಳಿಕೆಯ ಮೇಲೆ ಎಫ್ ಐಆರ್ ದಾಖಲಾಗಿದೆ. ಮೆಗ್ಗಾನ್ನಲ್ಲಿ ವೈದ್ಯರಾಗಿರುವ ಡಾ||ಸುಂದ್ರ,   ಕೃಷ್ಣ ಮೂರ್ತಿ ಮತ್ತು ರಾಘವೇಂದ್ರ ಅವರ ನಾದಿನಿ ವಿನೋದಾ ಅವರ ವಿರುದ್ಧ ಎಫ್ ಐಆರ್ ದಾಖಲಾಗಿದೆ.

  ಕೊಪ್ಪ ತಾಲೂಕಿನ ಮೇಲಿನ ಪೇಟೆ ನಿವಾಸಿ ಮತ್ತು ನಾಗರತ್ನ ರಾಘವೇಂದ್ರ ಕೇಕುಡ ಅವರ ಕಿರಿಯ ಸಹೋದರ ತೇಜ್ ಪ್ರಕಾಶ್ ಅವರು ತಮ್ಮ ಅಕ್ಕ ನಾಗರತ್ನ, ಭಾವ ರಾಘವೇಂದ್ರ ಕೇಕುಡ, ಮಕ್ಕಳಾದ ಶ್ರೀರಾಮ ಮತ್ತು ಭರತ್ ಇವರ ಸಾವಿಗೆ ರಾಘವೇಂದ್ರ ಕೇಕುಡರ ಸಹೋದ ರರಾದ ಡಾ|| ಸುಂದ್ರ, ಕೃಷ್ಣಮೂರ್ತಿ ಹಾಗೂ ನಾದಿನಿ ವಿನೋದ ಕಾರಣ. ಅವರಿಂದಲೇ ಸಾವು ಸಂಭವಿಸಿದೆ. ಇವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿದ್ದರು.

ರಾಘವೇಂದ್ರ ಕೇಕುಡರಿಗೆ ಕೃಷ್ಣಮೂರ್ತಿ ಮಂಜುನಾಥ  ರಾಮಕೃಷ್ಣ, ಡಾ|| ಸುಂದ್ರ ಎಂಬ ನಾಲ್ವರು  ಸಹೋದ ರರಿದ್ದು ಇವರ ಪೈಕಿ ಮಂಜುನಾಥ ಪೌತಿದಾರ ರಾಗಿದ್ದು, ಇವರ ಹೆಂಡತಿ  ವಿನೋದಾ ಆಗಿದ್ದಾರೆ. ಇವರಿಗೆ ಜಮೀನಿಗೆ ಸಂಬಂಸಿದಂತೆ ಹಿಸ್ಸೆಯಾಗಿದ್ದು, ರಾಮಕೃಷ್ಣ ಕೇಕುಡ ಇವರು ಹಿಸ್ಸೆ ತೆಗೆದುಕೊಂಡು ಬೇರೆ ವಾಸವಾಗಿದ್ದರು.

ಈ ಲಿಂಕ್ ಅನ್ನು ಕ್ಲಿಕ್ ಮಾಡಿ  http://www.krantideepa.com/

ಉಳಿದ ಸಹೋದರರಾದ ಡಾ|| ಸುಂದ್ರ, ಮತ್ತು ಕೃಷ್ಣಮೂರ್ತಿ ರಾಘವೇಂದ್ರ ಕೇಕುಡರೊಂದಿಗೆ ಜಮೀನಿನ ವ್ಯವಹಾರಕ್ಕೆ ಸಂಬಂದಿಸಿದಂತೆ ಜಿಪಿಎ ಮಾಡಿಕೊಂಡಿದ್ದರು. ರಾಘವೇಂದ್ರ ಕೇಕುಡ ಜಮೀನಿನ ಅಭಿವೃದ್ಧಿಗಾಗಿ ಸಾಲ ಮಾಡಿದ್ದರು, ಇವರ ಎರಡನೇ ಸಹೋದರ ಮಂಜುನಾಥ್ ಅವರ ಪತ್ನಿ ವಿನೋದಾ ಜಮೀನಿನ ಬಾಬ್ತಾಗಿ, 10 ಲಕ್ಷ ರೂಪಾಯಿಗಳನ್ನು ರಾಘವೇಂದ್ರ ಕೇಕುಡರಿಂದ ಪಡೆದಿದ್ದರು, ಆದರೆ ಪಡೆದ ಹಣದ ಬಗ್ಗೆ ಪತ್ರ ನೊಂದಣಿಯಾಗಿರಲಿಲ್ಲ.

 ಸುಮಾರು 2 ವರ್ಷಗಳ ಹಿಂದಿನಿಂದಲೂ ಜಮೀನಿನ ಮೇಲೆ ಮಾಡಿದ ಸಾಲದ ವಿಚಾರದಲ್ಲಿ  ಡಾ|| ಸುಂದ್ರ, ಕೃಷ್ಣ ಮೂರ್ತಿ,  ವಿನೋದಾ  ರಾಘವೇಂದ್ರರ ಕುಟುಂಬಕ್ಕೆ ಹಲವಾರು ಬಾರಿ ಬೈದು ಹಲ್ಲೆಗೆ ಯತ್ನಿಸಿ ಗಲಾಟೆ ಮಾಡಿ ಮಾನಸಿಕ ಹಿಂಸೆ ನೀಡಿದ್ದರು.

ಸಾಲ ತೀರಿಸದಿದ್ದರೆ ಮನೆ ಖಾಲಿ ಮಾಡುವಂತೆ ಬೆದರಿಸಿ ಮನೆ ಖಾಲಿ ಮಾಡದಿದ್ದರೆ, ಶಿವಮೊಗ್ಗದಿಂದ ಗುಂಡಾಗಳನ್ನು ಕರೆಯಿಸಿ ಮನೆಯಿಂದ ಹೊರ ಹಾಕಿಸುವುದಾಗಿ ಹಾಗೂ ಬ್ಯಾಂಕಿನ ಸಾಲವನ್ನು ಕಟ್ಟಬೇಕೆಂದು ಬೆದರಿಸಿದ್ದರು, ಈ ವಿಚಾರದಲ್ಲಿ, ರಾಘವೇಂದ್ರ ಕುಟುಂಬ ಅವರ ಬೆದರಿಕೆಗೆ ಮನನೊಂದು, ಮಾನಸಿಕ ಹಿಂಸೆಯನ್ನು ತಡೆಯಲಾಗದೆ ದಹನದ ಮೂಲಕ ಆತ್ಮಹತ್ಯೆ (ದೇಹ ತ್ಯಾಗ) ಮಾಡಿಕೊಂಡಿದ್ದಾರೆ ಎಂದು ತೇಜ್‌ಪ್ರಪ್ರಕಾಶ್ ದೂರಿನಲ್ಲಿ ದಾಖಲಿಸಿದ್ದಾರೆ.

ಅದ್ದರಿಂದ  ರಾಘವೇಂದ್ರ ಕುಟುಂಬ ವರ್ಗದವರ ಮರಣಕ್ಕೆ ಕಾರಣರಾದ  ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಡಾ|| ಸುಂದ್ರ ಶಿವಮೊಗ್ಗದ ಮೆಗ್ಗಾನ್‌ನಲ್ಲಿ ವೈದ್ಯರಾಗಿದ್ದಾರೆ.ಕೃಷ್ಣಮೂರ್ತಿ ಪ್ರಭಾವಿ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.