ಎಡಪಂಥೀಯ ಸಾಹಿತಿಗಳಿಗೆ ಬೆದರಿಕೆ ಪತ್ರ: ದಾವಣಗೆರೆಯ ಜಾಲಿನಗರದ ಆರೋಪಿ ಸೆರೆ, ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟ ಸತ್ಯವೇನು...?

ಎಡಪಂಥೀಯ ಸಾಹಿತಿಗಳಿಗೆ ಬೆದರಿಕೆ ಪತ್ರ: ದಾವಣಗೆರೆಯ ಜಾಲಿನಗರದ ಆರೋಪಿ ಸೆರೆ, ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟ ಸತ್ಯವೇನು...?
ದಾವಣಗೆರೆ: ಎಡಪಂಥೀಯ ಐವರು ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆದಿದ್ದ ಆರೋಪಿಯನ್ನು ದಾವಣಗೆರೆಯಲ್ಲಿ ಸಿಸಿಬಿ ಪೊಲೀಸರು ಸೆರೆ ಹಿಡಿದಿದ್ದಾರೆ. ಒಂದೂವರೆ ವರ್ಷಗಳ ಬಳಿಕ ಆರೋಪಿ ಸಿಕ್ಕಿಬಿದ್ದಿದ್ದಾನೆ. 
ದಾವಣಗೆರೆಯ ಜಾಲಿನಗರದ ಇಡಬ್ಲ್ಯೂಎಸ್ ಕಾಲೋನಿಯ ನಿವಾಸಿ ಶಿವಾಜಿ ರಾವ್ (30) ಬಂಧಿತ ಆರೋಪಿ. ಈತ ಪ್ರಿಂಟಿಂಗ್ ಪ್ರೆಸ್ ನಲ್ಲಿ ಕೆಲಸ ಮಾಡುತ್ತಿದ್ದ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ. 
ಎಡಪಂಥೀಯ ಸಾಹಿತಿಗಳಾದ ಬಿ. ಎಲ್. ವೇಣು, ಕುಂ. ವೀರಭದ್ರಪ್ಪ, ಬಿ. ಟಿ. ಲಲಿತಾ ನಾಯಕ್, ಬಂಜಗೆರೆ ಜಯಪ್ರಕಾಶ್, ವಸುಂಧರಾ ಭೂಪತಿ ಅವರಿಗೆ ಬೆದರಿಕೆ ಪತ್ರ ಬರೆದಿದ್ದ. ಇದು ಪೊಲೀಸರಿಗೂ ಸವಾಲಿನ ಪ್ರಕರಣವಾಗಿತ್ತು. 
ಈ ಲಿಂಕ್ ಅನ್ನು ಕ್ಲಿಕ್ ಮಾಡಿ  http://www.krantideepa.com/
ಬೆದರಿಕೆ ಪತ್ರ ಬರೆದ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು. ಈ ಪ್ರಕರಣದ ಜಾಡು ಹಿಡಿದ ಸಿಸಿಬಿ ಪೊಲೀಸರು ಅಂತೂ ಆರೋಪಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಹತ್ತು ದಿನಗಳ ಕಾಲ ವಿಚಾರಣೆಗೆ ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರಿಗೆ ಸ್ಫೋಟಕ ಮಾಹಿತಿ ಸಿಕ್ಕಿದೆ. 
ಹಿಂದೂ ವಿರೋಧಿ ಹೇಳಿಕೆ ನೀಡುತ್ತಿದ್ದ ಸಾಹಿತಿಗಳನ್ನು ಟಾರ್ಗೆಟ್ ಮಾಡಿದ್ದ ಶಿವಾಜಿ ರಾವ್, ಒಟ್ಟು ಏಳು ಪತ್ರಗಳನ್ನು ಬರೆದಿದ್ದಾಗಿ ಒಪ್ಪಿಕೊಂಡಿದ್ದಾನೆ. ಹಿಂದೂ ಧರ್ಮದ ಬಗ್ಗೆ ಅವಹೇಳನ, ವಿರೋಧಿ ಹೇಳಿಕೆ ನೀಡುತ್ತಿದ್ದದ್ದು ಮನಸ್ಸಿಗೆ ಬೇಸರವಾಗಿತ್ತು. ಆಕ್ರೋಶಕ್ಕೂ ಕಾರಣವಾಗಿತ್ತು. ಈ ಕಾರಣಕ್ಕೆ ಬೆದರಿಕೆ ಪತ್ರ ಬರೆದಿದ್ದಾಗಿ ಆರೋಪಿ ಶಿವಾಜಿ ರಾವ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ. 
ಎಡಪಂಥೀಯ ವಿಚಾರಧಾರೆ ಹೊಂದಿದ್ದ ಸಾಹಿತಿಗಳು ಭಾಷಣ ಮಾಡುವಾಗಲೆಲ್ಲಾ ಹಿಂದುತ್ವದ ವಿರುದ್ಧವೇ ಮಾತನಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಪತ್ರ ಬರೆದಿದ್ದೆ. ಬೇರೆ ಕೆಟ್ಟ ಉದ್ದೇಶ ಇರಲಿಲ್ಲ. ಬೆದರಿಕೆ ಪತ್ರ ಬಂದ ಬಳಿಕ ಹೇಳಿಕೆ ನಿಲ್ಲಿಸಬಹುದು ಎಂಬ ಕಾರಣಕ್ಕೆ ಪತ್ರ ಬರೆದಿದ್ದಾಗಿ ಹೇಳಿದ್ದಾನೆ. 
ಶಿವಾಜಿ ರಾವ್ ಹಿಂದೂ ಸಂಘಟನೆಯೊಂದರಲ್ಲಿ ಗುರುತಿಸಿಕೊಂಡಿದ್ದ ಎನ್ನಲಾಗಿದೆ. ಸದ್ಯಕ್ಕೆ ಐವರು ಸಾಹಿತಿಗಳಿಗೆ ಏಳು ಬೆದರಿಕೆ ಪತ್ರ ಬರೆದಿದ್ದು ಗೊತ್ತಾಗಿದೆ. ಹೆಚ್ಚಿನ ವಿಚಾರಣೆಗೆ ಹತ್ತು ದಿನಗಳ ಕಸ್ಟಡಿಗೆ ಪಡೆದಿರುವ ಸಿಸಿಬಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಬೇರೆ ಯಾರಿಗಾದರೂ ಈತ ಪತ್ರ ಬರೆದಿದ್ದನಾ? ಈತನ ವಿರುದ್ಧ ಬೇರೆ ಯಾವೆಲ್ಲಾ ಪ್ರಕರಣಗಳು ದಾಖಲಾಗಿವೆ ಎಂಬದೂ ಸೇರಿದಂತೆ ಎಲ್ಲಾ ರೀತಿಯ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಆದ ಬಳಿಕ ಈ ಪ್ರಕರಣ ಗಂಭೀರವಾಗಿ ಪರಿಗಣಿಸಿ ಸಿಸಿಬಿಗೆ ವರ್ಗಾಯಿಸಲಾಗಿತ್ತು. ಸಿಸಿಬಿ ಪೊಲೀಸರು ಶುಕ್ರವಾರದಂದು ದಾವಣಗೆರೆಯಲ್ಲಿ ಬಂಧಿಸಿ ಕರೆದೊಯ್ದಿದಿದ್ದಾರೆ ಎಂದು ತಿಳಿದು ಬಂದಿದೆ.