ಭವಿಷ್ಯವಿಲ್ಲದಲ್ಲಿ ಸುರಿಸಿದ ಬೆವರಿಗೆ ಬೆಲೆ ಇಲ್ಲ, ಎರಡು ದಶಕಗಳ ಜೆಡಿಎಸ್ ಬಾಂಧವ್ಯ ಕಡಿದುಕೊಳ್ಳುವೆ: ಎಂ.ಶ್ರೀಕಾಂತ್

ಭವಿಷ್ಯವಿಲ್ಲದಲ್ಲಿ ಸುರಿಸಿದ ಬೆವರಿಗೆ ಬೆಲೆ ಇಲ್ಲ, ಎರಡು ದಶಕಗಳ ಜೆಡಿಎಸ್ ಬಾಂಧವ್ಯ ಕಡಿದುಕೊಳ್ಳುವೆ: ಎಂ.ಶ್ರೀಕಾಂತ್

ಶಿವಮೊಗ್ಗ,ಸೆ.23 : ಭವಿಷ್ಯವಿಲ್ಲದ ಜಾಗದಲ್ಲಿ ಸುರಿಸಿರುವ ಬೆವರಿಗೆ ಬೆಲೆ ಇಲ್ಲ. 22 ವರ್ಷಗಳಿಂದ ಶಿವಮೊಗ್ಗಜಿಲ್ಲೆಯಲ್ಲಿ ಜಾತ್ಯತೀತ ಜನತಾದಳಕ್ಕಾಗಿ ದುಡಿದಿದ್ದೇನೆ. ಈ ಅವಧಿಯಲ್ಲಿ ನಾನು ಏನೂ ಅಧಿಕಾರ ಪಡೆದಿಲ್ಲ. ಆದರೆ ಹಲವರು ಅಧಿಕಾರ ಅನುಭವಿಸಲು ಕಾರಣನಾಗಿದ್ದೇನೆ ಎಂಬ ಆತ್ಮತೃಪ್ತಿಯಿದೆ. ಸಧ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಶಿವಮೊಗ್ಗದಲ್ಲಿ ಜೆಡಿಎಸ್‌ಗೆ ಭವಿಷ್ಯ ಇಲ್ಲ ಎಂಬ ಅರಿವಾಗಿರುವ ಕಾರಣ  ನನ್ನ ಬೆಂಬಲಿಗರೊಂದಿಗೆ ಸೇರಿ ಕಾಂಗ್ರೆಸ್ ಪಕ್ಷ ಸೇರುತ್ತಿದ್ದೇನೆ ಎಂದು ಶಿವಮೊಗ್ಗ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ.ಶ್ರೀಕಾಂತ್ ಹೇಳಿದರು.


 ಶಿವಮೊಗ್ಗ ಪತ್ರಿಕಾ ಭವನದಲ್ಲಿ ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು,ಶಿವಮೊಗ್ಗ ಕ್ಷೇತ್ರದಲ್ಲಿ ಶೂನ್ಯವಾಗಿದ್ದ ಪಕ್ಷವನ್ನು ಪ್ರಬಲವಾಗಿ ಬೆಳೆಸಲು ಶ್ರಮಿಸಿದ್ದೇನೆ. ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದೇನೆ. ಎರಡು ಬಾರಿ ಪಕ್ಷ ಮೈತ್ರಿ ಸರಕಾರ ರಚಿಸಿತ್ತು. ಈ ಅವಧಿಯಲ್ಲಿಯೂ ನಾನು ಯಾವುದೇ ಅಧಿಕಾರ ಪಡೆಯಲಿಲ್ಲ. ನಿಷ್ಠೆಯಿಂದ ಪಕ್ಷ ಸಂಘಟನೆ ಮಾಡಿದೆ. ಆದರೆ ಈಗ ಎಷ್ಟು ದುಡಿದರೂ ಶಿವಮೊಗ್ಗದಲ್ಲಿ ಜೆಡಿಎಸ್ ಮೇಲೆತ್ತಲು ಆಗುವುದಿಲ್ಲ. ಭವಿಷ್ಯವೇ ಇಲ್ಲದ ಕಡೆ ಬೆವರು ಹರಿಸಿದರೆ ಫಲ ಇಲ್ಲ. ಹೀಗಾಗಿ ನನ್ನ ರಾಜಕೀಯ ಸಿದ್ಧಾಂತಕ್ಕೆ ಸರಿಹೊಂದುವ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಸೇರುತ್ತಿದ್ದೇನೆ. ಸೆ.26 ರಂದು ಕೆಪಿಸಿಸಿ ಕಚೇರಿಯಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರುತ್ತಿದ್ದೇನೆ. ನನ್ನೊಂದಿಗೆ ಮಹಾನಗರ ಪಾಲಿಕೆ ಮಾಜಿ ಮೇಯರ್, ಉಪಮೇಯರ್, ಕಾರ್ಪೋರೇಟರ್‌ಗಳು ಸೇರಿದಂತೆ ಅನೇಕರು ಮುಖಂಡರು ಪಕ್ಷ ಸೇರುವರು ಎಂದು ಶ್ರೀಕಾಂತ್ ಹೇಳಿದರು.

ಕಳೆದ ವಿಧಾನಸಭೆ ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಸೇರಲು ನಿರ್ಧರಿಸಿದ್ದೆ. ಆದರೆ ಮುಖಂಡರುಗಳು ಚುನಾವಣೆ ಹೊತ್ತಲ್ಲಿ ಬೇಡ. ಎರಡು ದಶಕಗಳ ಕಾಲ ದುಡಿದಿದ್ದೀರಿ ಈಗ ಬೇಡ ಎಂದಿದ್ದರು. 2013 ರಲ್ಲಿಯೂ ಒಮ್ಮೆ ಪಕ್ಷ ಬಿಡುವ ಆಲೋಚನೆ ಮಾಡಿದ್ದೆ. ಅಂದು ದೇವೇಗೌಡರು ಮತ್ತು ಕುಮಾರಣ್ಣ ಪಕ್ಷ ಬಿಡಬೇಡ ಎಂದಿದ್ದರಿಂದ ಉಳಿದುಕೊಂಡಿದ್ದೆ. ಈಗ ನಿರ್ಧಾರ ಗಟ್ಟಿ ಮಾಡಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೇನೆ. ಮಧುಬಂಗಾರಪ್ಪ ಅವರ ಸಾರಥ್ಯದಲ್ಲಿ ಕಾಂಗ್ರೆಸ್ ಸೇರುವೆ. ಯಾವುದೇ ಹುದ್ದೆ ನಿರೀಕ್ಷೆ ಇಲ್ಲದೆ ಸಾಮಾನ್ಯ ಕಾರ್ಯಕರ್ತನಾಗಿ ಕಾಂಗ್ರೆಸ್ ಸೇರುತ್ತಿದ್ದೇನೆ. ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ಮುಂದೆ ಕೆಲಸ ಮಾಡುವೆ ಎಂದು ಹೇಳಿದರು.

ಭಾವನಾತ್ಮಕ ಸಂಬಂಧ: 

ಮಾಜಿ ಪ್ರಧಾನಿ ದೇವೇಗೌಡರೊಂದಿಗೆ ನನಗೆ ಭಾವನಾತ್ಮಕವಾದ ಸಂಬಂಧ ಇದೆ. ಅವರ ಕಾರಣಕ್ಕಾಗಿಯೇ ಎಂತಹ ಸಂದರ್ಭದಲ್ಲಿಯೂ ಜೆಡಿಎಸ್ ಬಿಟ್ಟಿರಲಿಲ್ಲ. ಯಾವುದೇ ಅಧಿಕಾರ ಇಲ್ಲದಾಗೂ ಶ್ರದ್ಧೆಯಿಂದ ಕೆಲಸ ಮಾಡಿದ್ದೆ. ಶಿವಮೊಗ್ಗದಲ್ಲಿ ತ್ರಿಕೋನ ಸ್ಪರ್ಧೆ ಏಪೃಡುವ ಹಂತಕ್ಕೆ ಜೆಡಿಎಸ್ ಬೆಳೆಸಿದ್ದೇನೆ. ಕುಮಾರಣ್ಣರೂ ಸೋದರರಂತೆ ನನ್ನನ್ನು ಕಂಡಿದ್ದಾರೆ. ಅವರ ಕುಟುಂಬದ ಮೇಲೆ ಅದೇ ಗೌರವ ಇರುತ್ತದೆ. ಆದರೆ ನನ್ನ ರಾಜಕೀಯ ಭವಿಷ್ಯಕ್ಕಾಗಿ ನಾನು ಕಾಂಗ್ರೆಸ್ ಸೇರುತ್ತಿದ್ದೇನೆ ಎಂದು ಶ್ರೀಕಾಂತ್ ಹೇಳಿದರು.

ಶಿವಮೊಗ್ಗವೇ ಕಾರ್ಯಕ್ಷೇತ್ರ:
ಕಾಂಗ್ರೆಸ್ ಸೇರಿದ ಬಳಿಕ ಬೆಂಗಳೂರಿಗೆ ಹೋಗ್ತೇನೆ ಎಂಬುದು ಸುಳ್ಳು. ಶಿವಮೊಗ್ಗವೇ ನನ್ನ ಕಾರ್ಯಕ್ಷೇತ್ರ. ನನ್ನ ಊರಿನಲ್ಲಿಯೇ ಇಷ್ಟು ವರ್ಷ ರಾಜಕಾರಣ ಮಾಡಿದ್ದೇನೆ. ಮುಂದೆಯೂ ಇಲ್ಲಿಯೇ ರಾಜಕಾರಣ ಮಾಡುವೆ. ಬೆಂಗಳೂರಿನ ರಾಜಕಾರಣ ಆಸಕ್ತಿಯಿಲ್ಲ. ಒಮ್ಮೆ ಸ್ನೇಹಿತರ ಒತ್ತಡಕ್ಕೆ ಮಣಿದು ಬಿಬಿಎಂಪಿಯಲ್ಲಿ ಸ್ಪರ್ಧೆ ಮಾಡಿದ್ದೆ. ಈಗ ಇಲ್ಲಿಯೇ ರಾಜಕಾರಣ ಮಾಡುವೆ. ಮುಂಬರುವ ಚುನಾವಣೆಗಳಲ್ಲಿ ಮಧುಬಂಗಾರಪ್ಪ ಅವರೊಂದಿಗೆ ಸೇರಿ ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ. ಶಿವಮೊಗ್ಗ ನಗರ ಹಾಗೂ ಜಿಲ್ಲೆಯ ಜನರ ಸಮಸ್ಯೆ ನೋವುಗಳಿಗೆ ಎಂದಿನಂತೆ ಸ್ಪಂದಿಸುತ್ತೇನೆ. ಜನರೊಂದಿಗೆ ಇರುವುದು ನನಗೆ ಇಷ್ಟ ಅದರಂತೆ ಕೆಲಸ ಮಾಡುವೆ ಎಂದರು.
ಮಾಜಿ ಮೇಯರ್ ಹಾಗೂ ಹಾಲಿ ಪಾಲಿಕೆ ಸದಸ್ಯ ನಾಗರಾಜ್ ಕಂಕಾರಿ, ಮಾಜಿ ಉಪಮೇಯರ್ ಪಾಲಾಕ್ಷಿ, ಪ್ರಮುಖರಾದ ಗಾಡಿಕೊಪ್ಪ ರಾಜಣ್ಣ, ಕೆ.ಜಿ.ನವಾಬ್, ಎಸ್.ಕೆ.ಭಾಸ್ಕರ್, ಜೆಡಿಎಸ್ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಉಪಾಧ್ಯಕ್ಷ ವಕೀಲ ಕೆ.ಎಲ್ ಉಮೇಶ್, ಎಸ್.ಎನ್.ಮಹೇಶ್, ಸೈಯದ್ ನುಮಾನ್, ಶಾಮು ಡಿ, ನವುಲೆ ಮಂಜುನಾಥ್,ಅನಿಲ್ ಕುಮಾರ್, ಸಂತೋಷ್, ಪ್ರಸನ್ನಕುಮಾರ್ ಸೇರಿದಂತೆ ಹಲವು ಮುಖಂಡರು ಪತ್ರಿಕಾ ಗೋಷ್ಠಿಯಲ್ಲಿ ಹಾಜರಿದ್ದರು.

ಶಿವಮೊಗ್ಗ ನಗರ ಮತ್ತು ಜಿಲ್ಲೆಯಲ್ಲಿ ಜೆಡಿಎಸ್‌ಗೆ ಮುಂದಿನ ದಿನಗಳಲ್ಲಿ ಭವಿಷ್ಯ ಇಲ್ಲ. ಈಗ ಬಿಜೆಪಿಯೊಂದಿಗೆ ಮಾಡಿಕೊಂಡಿರುವ ಮೈತ್ರಿಯಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಯಾವುದೇ ಪರಿಣಾಮ ಆಗುವುದಿಲ್ಲ. ಇಷ್ಟು ವರ್ಷ ಪಕ್ಷದಲ್ಲಿ ಪ್ರಾಮಾಣಿಕವಾಗಿ ದುಡಿದಿದ್ದೇನೆ. ನನ್ನ ಹಾಗೂ ಬೆಂಬಲಿಗರ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಕಾಂಗ್ರೆಸ್ ಸೇರುತ್ತಿದ್ದೇನೆ. ಕಾಂಗ್ರೆಸ್ ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ನಿರ್ವಹಿಸುತ್ತೇನೆ.

-ಎಂ.ಶ್ರೀಕಾಂತ್.