ಅ. 1ಕ್ಕೆ ಹುಬ್ಬಳ್ಳಿಯಲ್ಲಿ ಉಪ್ಪಾರ ಮಹಾಸಭಾದಿಂದ ಪ್ರತಿಭಾ ಪುರಸ್ಕಾರ, ಶಾಸಕ ಪುಟ್ಟರಂಗಶೆಟ್ಟಿಯವರಿಗೆ ಸನ್ಮಾನ

ಸಮಾಜದ ಏಕೈಕ ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಸಿಎಂ ಸಿದ್ದರಾಮಯ್ಯರಿಗೆ ಹಕ್ಕೊತ್ತಾಯ: ವಿಷ್ಣು ರಾ. ಲಾತೂರ್

ಅ. 1ಕ್ಕೆ ಹುಬ್ಬಳ್ಳಿಯಲ್ಲಿ ಉಪ್ಪಾರ ಮಹಾಸಭಾದಿಂದ ಪ್ರತಿಭಾ ಪುರಸ್ಕಾರ, ಶಾಸಕ ಪುಟ್ಟರಂಗಶೆಟ್ಟಿಯವರಿಗೆ ಸನ್ಮಾನ

ದಾವಣಗೆರೆ: ರಾಜ್ಯ ಉಪ್ಪಾರ ಮಹಾಸಭಾದ ವತಿಯಿಂದ ಅಕ್ಟೋಬರ್ 1ಕ್ಕೆ ಹುಬ್ಬಳ್ಳಿಯ ಅಮರಗೋಳ ವಿದ್ಯಾಧಿರಾಜ ಕಲ್ಯಾಣ ಮಂಟಪದಲ್ಲಿ 2022-23 ನೇ ಸಾಲಿನ ಎಸ್ ಎಸ್ ಎಲ್ ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 80, ಅದಕ್ಕಿಂತ ಹೆಚ್ಚಿನ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ, ಉಪ್ಪಾರ ಸಮಾಜದ ಏಕೈಕ ಶಾಸಕ ಪುಟ್ಟರಂಗಶೆಟ್ಟಿಯವರಿಗೆ ಗೌರವ ಸನ್ಮಾನ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜದ ಸಾಧಕರಿಗೆ ಗೌರವ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಮಹಾಸಭಾದ ರಾಜ್ಯಾಧ್ಯಕ್ಷ ವಿಷ್ಣು ರಾ ಲಾತೂರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 10 ಗಂಟೆಗೆ ನಡೆಯುವ ಈ ಕಾರ್ಯಕ್ರಮದ ಉದ್ಘಾಟನೆಗೆ ಹುಬ್ಬಳ್ಳಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರಿಗೆ ಆಹ್ವಾನ ನೀಡಲಾಗುವುದು. ಸಚಿವರಾದ ಮಧು ಬಂಗಾರಪ್ಪ, ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಶಿವರಾಜ್ ತಂಗಡಗಿ ಅವರು ಆಗಮಿಸಲಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶಾಸಕರಾದ ಮಹೇಶ್ ಟೆಂಗಿನಕಾಯಿ, ಪ್ರಸಾದ್ ಸೇರಿದಂತೆ ಜನಪ್ರತಿನಿಧಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು ಎಂದರು.

ಸತತ ನಾಲ್ಕು ಬಾರಿ ಗೆದ್ದು ಶಾಸಕರಾಗಿ ಆಯ್ಕೆಯಾಗಿರುವ ಸಿ. ಪುಟ್ಟರಂಗಶೆಟ್ಟಿಯವರು ಉಪ್ಪಾರ ಸಮಾಜದ ಏಕೈಕ ಶಾಸಕರಾಗಿದ್ದಾರೆ. ಅವರಿಗೆ ಗೌರವ, ಸನ್ಮಾನ ಹಾಗೂ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಮೂಲಕ ಶಕ್ತಿ ಪ್ರದರ್ಶನ ಮಾಡಲಾಗುವುದು. ಸಮಾಜದ ಏಕೈಕ ಶಾಸಕರಾಗಿರುವ ಪುಟ್ಟರಂಗಶೆಟ್ಟಿ ಅವರಿಗೆ ಸಿಎಂ ಸಿದ್ದರಾಮಯ್ಯರು ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂಬ ಹಕ್ಕೊತ್ತಾಯವನ್ನೂ ಮಾಡಲಾಗುವುದು ಎಂದು ತಿಳಿಸಿದರು.

ಪುಟ್ಟರಂಗ ಶೆಟ್ಟಿಯವರು ಉಪ್ಪಾರ ಸಮಾಜದ ಏಳಿಗೆಗಾಗಿ ಹಾಗೂ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಮಾತ್ರವಲ್ಲ, ನಮ್ಮ ಸಮಾಜದಲ್ಲಿ ಸಚಿವರಾದವರು ಇವರೊಬ್ಬರೇ. ನಾಲ್ಕು ಬಾರಿ ಶಾಸಕರಾಗಿ ಜನಮನ್ನಣೆ ಗಳಿಸಿದ್ದಾರೆ. ಹಾಗಾಗಿ, ಅವರನ್ನು 
ಗೌರವಿಸುವುದು ನಮ್ಮ ಕರ್ತವ್ಯ. ಸಮಾಜದ ಬಾಂಧವರೆಲ್ಲರೂ ಸೇರಿಕೊಂಡು ಮಾಡುತ್ತಿರುವ ಕಾರ್ಯಕ್ರಮ ಇದಾಗಿದ್ದು, ಈ ಕಾರ್ಯಕ್ರಮದಲ್ಲಿ ಸಮಾಜದವರು ಪಾಲ್ಗೊಂಡು ಯಶಸ್ವಿಗೊಳಿಸಿಕೊಡಬೇಕು ಎಂದು ಅವರು ಮನವಿ ಮಾಡಿದರು.

ರಾಜ್ಯಮಟ್ಟದಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಇದಾಗಿದ್ದು, ಸಮಾಜದ ಹಿರಿಯರು, ಮುಖಂಡರು, ಮಹಿಳಾ ಮುಖಂಡರು, ಯುವ ನೇತಾರರ ಸಮಾಗಮ ಆಗಲಿದ್ದು, ಸಮಾಜದ ಶ್ರೀಗಳು ಸಹ ಈ ಕಾರ್ಯಕ್ರಮಕ್ಕೆ ಬರಲಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಲಿಂಕ್ ಅನ್ನು ಕ್ಲಿಕ್ ಮಾಡಿ  http://www.krantideepa.com/

ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಗುವುದು. ಶೈಕ್ಷಣಿಕ ದತ್ತು ಅಭಿಯಾನ ಕೈಗೊಳ್ಳಲಾಗಿದೆ. ಕಷ್ಟ ಹಾಗೂ ಬಡತನದಲ್ಲಿರುವ ವಿದ್ಯಾರ್ಥಿಗಳನ್ನು ದತ್ತು ಪಡೆದು ಅವರ ವ್ಯಾಸಂಗಕ್ಕೆ ಎಲ್ಲಾ ರೀತಿಯ ಸಹಕಾರವನ್ನು ಮಹಾಸಭಾ ನೀಡುತ್ತದೆ ಎಂದರು.

ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಭರತ್ ಎಸ್. ಮೈಲಾರ್ ಮಾತನಾಡಿ, ಪ್ರತಿಭಾ ಪುರಸ್ಕಾರಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಇದುವರೆಗೆ ರಾಜ್ಯದ ಮೂಲೆ ಮೂಲೆಗಳಿಂದ ಸುಮಾರು 1400 ವಿದ್ಯಾರ್ಥಿಗಳ ಅರ್ಜಿ ಬಂದಿವೆ. ಸುಮಾರು 2000 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಗುರಿ ಹೊಂದಲಾಗಿದೆ. ವಿದ್ಯಾರ್ಥಿಗಳು ಬರುವಾಗ ಎಸ್. ಎಸ್. ಎಲ್. ಸಿ. ಇಲ್ಲವೇ ಪಿಯುಸಿ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಜೆರಾಕ್ಸ್ ತರಬೇಕು. ಈಗ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸ್ಥಗಿತಗೊಂಡಿದೆ. ಕಾರ್ಯಕ್ರಮಕ್ಕೆ ಬರುವ ವಿದ್ಯಾರ್ಥಿಗಳು ಅಲ್ಲಿಯೇ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಈಶ್ವರಪ್ಪ ಶಿರಕೋಳ, ಗೌರವ ಸಲಹೆಗಾರ ರಾಮಕೃಷ್ಣ ಬಬಲಿ, ಮಂಜುನಾಥ್, ಸುಧೀರ್ ಉಪ್ಪಾರ್ ಮತ್ತಿತರರು ಹಾಜರಿದ್ದರು.