ಸೆ. 15: ನಗರದಲ್ಲಿ ನಮ್ಮ ನಡಿಗೆ ಶಾಂತಿಯ ಕಡೆಗೆ

ಸಿಮ್ಸ್ ಅಂಗಳದಿಂದ ಸೈನ್ಸ್ ಕಾಲೇಜು ಮೈದಾನದವರೆಗೆ ರಾಷ್ಟ್ರಧ್ವಜ ಹಿಡಿದು ಜಾಥಾ

ಸೆ. 15: ನಗರದಲ್ಲಿ ನಮ್ಮ ನಡಿಗೆ ಶಾಂತಿಯ ಕಡೆಗೆ

ಶಿವಮೊಗ್ಗ,ಸೆ.13: ಸಾಲು ಸಾಲು ಹಬ್ಬಗಳು ಬರುತ್ತಿರುವ ಈ ದಿನಗಳಲ್ಲಿ ಶಿವ ಮೊಗ್ಗದ ಜನರು ಶಾಂತಿ, ಸಹಬಾಳ್ವೆಯಿಂದ ಎಲ್ಲ ಹಬ್ಬಗಳನ್ನು ಮಾಡಲಿ ಎಂಬ ಸದುದ್ದೇ ದೊಂದಿಗೆ ಸೆ. 15 ರಂದು ಸಂಜೆ 4 ರಿಂದ 6 ರವರೆಗೆ ಸೌಹಾರ್ದವೇ ಹಬ್ಬ ಎಂಬ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. 

ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ  ಸೌಹಾರ್ದವೇ ಹಬ್ಬ ಸಮಿತಿಯ ಮುಖಂಡರದಲ್ಲೊಬ್ಬರಾದ ನ್ಯಾಯವಾದಿ ಕೆ ಪಿ ಶ್ರೀಪಾಲ್, ನಗರದ ಹಲವು ಸಂಘ ಸಂಸ್ಥೆಗಳು, ನಾಗರಿಕರು ಸೇರಿ ಚಿಂತಿಸಿದ ಫಲವಾಗಿ "ಸೌಹಾರ್ದವೇ ಹಬ್ಬ" ಪರಿಕಲ್ಪನೆ ಹುಟ್ಟಿದೆ. ಶಿವಮೊಗ್ಗ ನಗರದ ಏಳಿಗೆಯು ನಗರದ ವ್ಯಾಪಾರಸ್ಥರ, ಉದ್ಯಮಿಗಳ, ನಾಗರಿಕರ, ಆಟೋ ಮತ್ತು ಬಸ್ ಚಾಲಕರ, ಶಾಲಾ ಕಾಲೇಜುಗಳ ಮಕ್ಕಳ, ಎಲ್ಲ ತಾಯಂದಿರ ನೆಮ್ಮದಿಯಲ್ಲಿ ಅಡಗಿದೆ. ಎಲ್ಲ ಧರ್ಮಗಳ ಜನರು ಸಹಬಾಳ್ವೆಯಿಂದ ಸೌಹಾರ್ದಯುತವಾಗಿ,ನಿರುಮ್ಮಳವಾಗಿ ಹಬ್ಬಗಳನ್ನು ಆಚರಿಸುವಂತಾಗಬೇಕು ಎನ್ನು ವುದು ಇದರ ಉದ್ದೇಶ ಎಂದರು. 

ಈ ಬಾರಿ ಹಿಂದೂ ಮಹಾಸಭಾ ಗಣಪತಿ ಯ ವಿಸರ್ಜನೆ ಮತ್ತು ಈದ್ ಮಿಲಾದ್ ಹಬ್ಬಗಳು ಒಟೊಟ್ಟಿಗೆ ಬಂದಿವೆ. ಊರಿನ ನಾಗರಿಕ ಬಂಧುಗಳೆಲ್ಲ ಸಂಭ್ರಮ ದಿಂದ ಎರಡು ಹಬ್ಬಗಳನ್ನು ಸೌಹಾರ್ದ ಯುತವಾಗಿ ಆಚರಿಸಬೇಕಿದೆ. ಎಲ್ಲರಿಗೂ ಮಾದರಿಯಾಗ ಬೇಕಿದೆ. ಈ ನಿಟ್ಟಿನಲ್ಲಿ ನಗರದ ಎಲ್ಲ ಧರ್ಮಗಳ ಜನರು ಮತ್ತು ಧಾರ್ಮಿಕ ಗುರುಗಳು ಸೇರಿ ಎಲ್ಲ ಹಬ್ಬ ಗಳಿಗೂ ಮುನ್ನುಡಿಯಾಗಿ ’ಸೌಹಾರ್ದವೇ ಹಬ್ಬ" ಆಚರಿಸಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು. ಸೆ. 15 ರ ಶುಕ್ರವಾರ ಸಂಜೆ 4 ರಿಂದ 6 ಗಂಟೆಯವರೆಗೆ ನಗರದ ಮೆಗ್ಗಾನ್ ಆಸ್ಪತ್ರೆಯ (ಸಿಮ್ಸ್ )ಅಂಗಳದಿಂದ ಸೈನ್ಸ್ ಕಾಲೇಜು ಮೈದಾನದವರೆಗೆ ಎಲ್ಲ ಧರ್ಮಗಳ ಜನರು ನಮ್ಮ ರಾಷ್ಟ್ರಧ್ವಜ ಹಿಡಿದು, ನಮ್ಮ ನಡೆ-ನುಡಿ, ಆಚಾರ- ವಿಚಾರಗಳು ಬೇರೆಯಾದರೂ, ನಾವೆಲ್ಲಾ ಒಂದೇ - ನಾವೆಲ್ಲಾ ಭಾರತಾಂಬೆಯ ಮಕ್ಕಳು ಎಂದು ಸಂದೇಶ ಸಾರುತ್ತ, ಹಲವು ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ 2,000 ಅಡಿಯ ಬಾವುಟವನ್ನು ಹಿಡಿದು ಸಾಗಿ "ಸೌಹಾರ್ದವೇ ಹಬ್ಬ" ಎಂದು ಸಾರಲಾಗುವುದು.

ಈ ಸದ್ಭಾವನೆಯ ಹಬ್ಬಕ್ಕೆ ಎಲ್ಲ ಜನರು ಜಾತಿ ಧರ್ಮ ಭೇದವಿಲ್ಲದೆ, ಪಕ್ಷಾತೀತವಾಗಿ ಬಂದು ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.

 ಶಿವಮೊಗ್ಗದಲ್ಲಿ ಶಾಂತಿ ಸಹಬಾಳ್ವೆಯಿಂದ ಬದುಕುತ್ತೇವೆ ಮತ್ತು ಸೌಹಾರ್ದವಾಗಿ ಹಬ್ಬಗಳನ್ನು ಆಚರಿಸುತ್ತೇವೆ ಎಂದು ಒಗ್ಗ ಟ್ಟಾಗಿ ಹೇಳಬೇಕಿದೆ. ಕುಟುಂಬದವರು ಮತ್ತು ಸ್ನೇಹಿತರೊಡಗೂಡಿ ಬಂದು "ಸೌಹಾರ್ದವೇ ಹಬ್ಬ" ಆಚರಿಸುವಲ್ಲಿ ನೆರವಾಗಬಹುದು ಎಂದರು. 

ಪತ್ರಿಕಾಗೋಷ್ಠಿಯಲ್ಲಿ ನಮ್ಮ ನಡಿಗೆ ಶಾಂತಿಯ ಕಡೆಗೆ ಸಮಿತಿಯ ರೈತ ಸಂಘದ ರಾಜ್ಯಾಧ್ಯಕ್ಷ ಎಚ್. ಆರ್ ಬಸವರಾಜಪ್ಪ,  ಕ್ಲಿಫರ್ಡ್ ರೋಶನ್ ಪಿಂಟೊ,  ಕಿರಣ್‌ಕುಮಾರ್ ಕೆ., ಡಿ ಎಸ್ ಎಸ್ ನ ಎಂ. ಗುರುಮೂರ್ತಿ, ಲಿಯಾಕತ್,  ಇಸ್ಮಾಯಿಲ್, ಮೊಹಮ್ಮದ್ ಹುಸೇನ್, ರಫೀ, ಸುರೇಸ್ ಅರಸಾಳು ಮೊಲದಾದವರಿದ್ದರು.