ಸೂರ್ಯ ಚಂದ್ರರಷ್ಟೇ ಸತ್ಯ ಬಿಜೆಪಿ 140 ಸ್ಥಾನಗಳಲ್ಲಿ ಗೆದ್ದು ಅಧಿಕಾರಕ್ಕೆ: ಬಿಎಸ್ ವೈ ವಿಶ್ವಾಸ

ಸೂರ್ಯ ಚಂದ್ರರಷ್ಟೇ ಸತ್ಯ ಬಿಜೆಪಿ 140 ಸ್ಥಾನಗಳಲ್ಲಿ ಗೆದ್ದು ಅಧಿಕಾರಕ್ಕೆ: ಬಿಎಸ್ ವೈ ವಿಶ್ವಾಸ

ದಾವಣಗೆರೆ: 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 140 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ.

ಸೂರ್ಯ, ಚಂದ್ರ ಇರುವುದು ಎಷ್ಟೋ ಸತ್ಯವೋ ನಾವು ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಜಗಳೂರು ಪಟ್ಟಣದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ಜನಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ನ ಕೆಲ ನಾಯಕರು ಸಿಎಂ ಆಗ್ತೇವೆಂದು ತಿರುಕನ ಕನಸು ಕಾಣುತ್ತಿದ್ದಾರೆ. ತಿರುಕನ ಕನಸು ಕನಸಾಗಿಯೇ ಉಳಿಯುತ್ತೆ. ಅದು ಕಾರ್ಯರೂಪಕ್ಕೆ ಬರಲ್ಲ ಅನ್ನೋದು ನನಗೂ ಹಾಗೂ ನಿಮಗೂ ಗೊತ್ತು.

ಕಾಂಗ್ರೆಸ್ ಹಣ, ಹೆಂಡ ಹಂಚಿ ತೋಳ್ಬಲದಿಂದ ಅಧಿಕಾರಕ್ಕೆ ಬಂದಿದೆ. ಜಾತಿ ವಿಷ ಬೀಜ ಬಿತ್ತಿ ಮತ್ತೆ ಅಧಿಕಾರಕ್ಕೆ ಬರುವ ಕನಸು ಕಾಂಗ್ರೆಸ್ ಕಾಣುತ್ತಿದ್ದು, ಈಡೇರುವುದಿಲ್ಲ ಎಂದರು.  

ದೊಂಬರಾಟ ಮಾಡುತ್ತಿರುವ ಕಾಂಗ್ರೆಸ್ ಗೆ ಪಾಠ ಕಲಿಸಬೇಕೆಂಬ ನಿರ್ಧಾರವನ್ನು ಜನರು ಈಗಾಗಲೇ ಮಾಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ. ನಡ್ಡಾ ಸೇರಿದಂತೆ ಬಿಜೆಪಿ ವರಿಷ್ಠರು ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುತ್ತಾರೆ ಎಂದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಹಾಗೂ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಜನರಿಗೆ ಇಷ್ಟವಾಗಿದೆ.

ಸಂಸದ ಜಿ. ಎಂ. ಸಿದ್ದೇಶ್ವರ್ ನೇತೃತ್ವದಲ್ಲಿ ದಾವಣಗೆರೆ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಿ ಎಂದು ಹೇಳಿದರು.

ನನ್ನ ಹುಟ್ಟೂರು ಬೂಕನಕೆರೆಯಲ್ಲಿ ಪೂಜಾ ಕಾರ್ಯಕ್ರಮ ಇರುವ ಕಾರಣ ಬೇಗ ಹೋಗುತ್ತಿದ್ದೇನೆ. ಎಸ್. ವಿ. ರಾಮಚಂದ್ರ ನನ್ನ ಆತ್ಮೀಯ ಸ್ನೇಹಿತ.

ಐದು ನಿಮಿಷವಾದರೂ ಬಂದು ಹೋಗಿ ಎಂದಿದ್ರು. ಹಾಗಾಗಿ ಬಂದಿದ್ದೇನೆ. ಜಗಳೂರು ತಾಲೂಕಿನಲ್ಲಿ ರಾಮಚಂದ್ರ ಅವರು ಸುಮಾರು 3500 ಕೋಟಿ ರೂಪಾಯಿಗೂ ಹೆಚ್ಚು ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿದ್ದಾರೆ. 224 ಶಾಸಕರ ಪೈಕಿ ಹೆಚ್ಚು ಅನುದಾನ ಪಡೆದವರು. ನಾನು ಸಹ ಶಿಕಾರಿಪುರಕ್ಕೆ ಇಷ್ಟೊಂದು ಅನುದಾನ ತಂದು ಕೆಲಸ ಮಾಡಲು ಆಗಿಲ್ಲ. ಮುಂಬರುವ ಚುನಾವಣೆಯಲ್ಲಿ 50 ಸಾವಿರ ಮತಗಳ ಅಂತರದಿಂದ ರಾಮಚಂದ್ರರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಕ್ಷಮಿಸಿ.. ಕ್ಷಮಿಸಿ...

ಇನ್ನು ಮಾತು ಆರಂಭಿಸಿದ ಯಡಿಯೂರಪ್ಪನವರು ಸಂಸದರಾದ ಶ್ರೀರಾಮುಲು ಅವರೇ... ಎಂದರು. ಬಳಿಕ ತಪ್ಪು ಸರಿಪಡಿಸಿಕೊಂಡು ಸಚಿವ ಶ್ರೀರಾಮುಲು ಎಂದರು.

ಸಚಿವ ಬಿ. ಶ್ರೀರಾಮುಲು ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದರೆ ಪರಿಶಿಷ್ಟ ವರ್ಗ, ವಾಲ್ಮೀಕಿ ಸಮುದಾಯದವರಿಗೆ ಮೀಸಲಾತಿ ಜಾಸ್ತಿ ಮಾಡಿಸುತ್ತೇವೆ ಎಂಬ ಮಾತು ನೀಡಿದ್ದೆ. ಬಸವರಾಜ್ ಬೊಮ್ಮಾಯಿ ಅವರು ವಾಲ್ಮೀಕಿ ಸಮುದಾಯಕ್ಕೆ ಶೇ. 3ರಿಂದ 7ರಷ್ಟು ಮೀಸಲಾತಿ ಜಾಸ್ತಿ ಮಾಡಿದ್ದಾರೆ. ಶೇಕಡಾ 24 ರಷ್ಟು ಮೀಸಲಾತಿ ಪರಿಶಿಷ್ಟ ವರ್ಗ ಮತ್ತು ಪಂಗಡದವರಿಗೆ ಸಿಗುತ್ತಿದೆ. ಸಿದ್ದರಾಮಯ್ಯರು ಮುಖ್ಯಮಂತ್ರಿಯಾದ ಮೇಲೆ ಮನಸ್ಸು ಮಾಡಿದ್ದರೆ ಮೀಸಲಾತಿ ಜಾಸ್ತಿ ಮಾಡಬಹುದಿತ್ತು. ಆದ್ರೆ ಯಾಕೆ ಮಾಡಲಿಲ್ಲ. ಬಸವರಾಜ್ ಬೊಮ್ಮಾಯಿ ಅವರು ಲಿಂಗಾಯತ ಸಮುದಾಯಕ್ಕೆ ಸೇರಿದರೂ ನಮ್ಮ ಬೇಡಿಕೆ ಈಡೇರಿಸಿದ್ದಾರೆ.

ಇಂಥ ಗಂಡಸ್ತನ ತೋರಿಸಿದ್ದಾರೆ. ಪರಿಶಿಷ್ಟ ಜಾತಿ, ಪಂಗಡದವರ ಮೂಗಿಗೆ ತುಪ್ಪು ಸುರಿಯುವ ಕೆಲಸ ಕಾಂಗ್ರೆಸ್ ಮಾಡಿತ್ತು. ಜೇನುಗೂಡಿಗೆ ಕೈಹಾಕಿ ಮೀಸಲಾತಿ ನೀಡಿ ತುಪ್ಪ ತಿನ್ನಿಸುವ ಕೆಲಸ ಬಿಜೆಪಿ ಹಾಗೂ ಸಿಎಂ ಮಾಡಿದ್ದಾರೆ ಎಂದರು.

ಸಚಿವ ಗೋವಿಂದ ಕಾರಜೋಳ ಮಾತನಾಡಿ, ದೇಶ ವಿಭಜನೆಯಾಗಿದ್ದರೆ ರಾಹುಲ್ ಗಾಂಧಿ ತಾತಾ ಅವರಿಗೆ ಕೇಳಬೇಕು. 60 ವರ್ಷಗಳ ಕಾಲ ದೇಶದಲ್ಲಿ ಕಾಂಗ್ರೆಸ್ ಆಡಳಿತ ಮಾಡಿದೆ. ದೀನ ದಲಿತರು, ಅಲ್ಪಸಂಖ್ಯಾತರು, ಬಡವರ ಹೆಸರ ಮೇಲೆ ರಾಜಕಾರಣ ಮಾಡಿದವರು ಕಲ್ಯಾಣ ಮಾಡಲಿಲ್ಲ.

ಇನ್ನೆಂದೂ ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ. ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಹಾಗೂ ಜಿ. ಪರಮೇಶ್ವರ್ ಸೇರಿದಂತೆ ನಾಲ್ವರು ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡಿ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸಚಿವ ಬೈರತಿ ಬಸವರಾಜ್ ಮಾತನಾಡಿ, ರಾಮಚಂದ್ರ ಅವರಿಗೆ ಮತ್ತೊಮ್ಮೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು. ವೇದಿಕೆಯಲ್ಲಿ ಸಂಸದ ಜಿ. ಎಂ. ಸಿದ್ದೇಶ್ವರ್, ಶಾಸಕರಾದ ಎಸ್. ವಿ. ರಾಮಚಂದ್ರ, ಮಾಡಾಳು ವಿರೂಪಾಕ್ಷಪ್ಪ, ಎಂ. ಪಿ.ರೇಣುಕಾಚಾರ್ಯ, ರವಿಕುಮಾರ್, ನವೀನ್ ಕುಮಾರ್ ಮತ್ತಿತರರು ಹಾಜರಿದ್ದರು.