ಸಾಗರ ಪತ್ರಕರ್ತರಿಗೆ, ವಿತರಕರಿಗೆ ಆರೋಗ್ಯ ಕಾರ್ಡ್ ವಿತರಣೆ

ಒತ್ತಡದ ಕೆಲಸದಲ್ಲಿ ಪತ್ರಕರ್ತರಿಗೆ ಆರೋಗ್ಯ ಬಹು ಮುಖ್ಯ- ಗೋಪಾಲ ಯಡಗೆರೆ

ಸಾಗರ ಪತ್ರಕರ್ತರಿಗೆ, ವಿತರಕರಿಗೆ ಆರೋಗ್ಯ ಕಾರ್ಡ್ ವಿತರಣೆ

ಸಾಗರ, ಸೆ.21: ದಿನದ 24 ಗಂಟೆಯೂ ಒತ್ತಡದಲ್ಲಿ ಕೆಲಸ ರ್ವಹಿಸುವ ಪತ್ರಕರ್ತರಿಗೆ ಆರೋಗ್ಯವೂ ಬಹು ಮುಖ್ಯ ಎಂದು ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ ಯಡಗೆರೆ ಹೇಳಿದರು. 

ಇಲ್ಲಿನ ಪತ್ರಿಕಾ ಭವನದಲ್ಲಿ ಪ್ರೆಸ್‌ಟ್ರಸ್ಟ್ ಆಫ್ ಸಾಗರ್ ಮತ್ತು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬುಧವಾರ ಏರ್ಪಡಿಸಿದ್ದ ಪತ್ರಕರ್ತರಿಗೆ, ವಿತರಕರಿಗೆ ಸದಸ್ಯತ್ವ ಮತ್ತು ಆರೋಗ್ಯ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕಳೆದ ಎರಡು ದಶಕಗಳಲ್ಲಿ ಬದಲಾದ ಪತ್ರಿಕೋದ್ಯಮದಲ್ಲಿ ತುಂಬ ಒತ್ತಡದಲ್ಲಿ ಪತ್ರಕರ್ತ ಕೆಲಸ ಮಾಡುವುದು ಅನಿವಾರ್ಯವಾಗಿದೆ. ಆಯಾ ದಿನದ ಪತ್ರಿಕೆ ಮುದ್ರಣಕ್ಕೆ ಹೋಗುವವರೆಗೂ ಪತ್ರಕರ್ತರ ಒತ್ತಡದಲ್ಲೇ ಇರುತ್ತಾನೆ ಎಂದರು. 

ಪತ್ರಕರ್ತರು ಒತ್ತಡದಲ್ಲಿ ಕೆಲಸ ಮಾಡುವಾಗ ತನ್ನ ವಯಕ್ತಿಕ ಹಾಗೂ ಕುಟುಂಬದ ಆರೋಗ್ಯದ ಕಡೆ ಗಮನ ಹರಿಸುವುದಿಲ್ಲ. ಈಗ ದೃಶ್ಯ ಮಾಧ್ಯದ ಪತ್ರಕರ್ತರಿಗೂ ಒತ್ತಡ ಇನ್ನೂ ಹೆಚ್ಚಾಗಿದೆ. ನಮ್ಮ ಆರೋಗ್ಯ ಕೆಟ್ಟಾಗ ಯಾರೂ, ಯಾವ ಸಂಸ್ಥೆಯೂ ನಮ್ಮ ಬಳಿ ಬರುವುದಿಲ್ಲ. ಆಸ್ಪತ್ರೆಗೆ ಸೇರಿದಾಗ ಲಕ್ಷಾಂತರ ಹಣ ಖರ್ಚಾಗುತ್ತದೆ. ಇದನ್ನು ಭರಿಸುವುದು ತುಂಬ ಕಷ್ಟವಾಗುತ್ತದೆ. ಇಂಥ ಸಂದರ್ಭದಲ್ಲಿ ಆರೋಗ್ಯ ವಿಮೆ ಮಾಡಿಸಿದರೆ ಅದು ನಮ್ಮ ನೆರವಿಗೆ ಬರುತ್ತದೆ ಎಂದರು. 

ಮೂಲಭೂತವಾಗಿ ಪತ್ರಕರ್ತರಿಗೆ ಆರೋಗ್ಯ, ಬೌದ್ಧಿಕ ಮತ್ತು ಆರ್ಥಿಕ ಸುಸ್ಥಿರತೆ ಅಗತ್ಯವಿದೆ. ಇದನ್ನು ಕಲ್ಪಿಸಲು ಸಂಘ ಹಲವು ರೀತಿಯಲ್ಲಿ ಪ್ರಯತ್ನ ನಡೆಸುತ್ತಿದೆ. ಈ ಪ್ರಯತ್ನದ ಒಂದು ಭಾಗವಾಗಿ ಶಿವಮೊಗ್ಗದಲ್ಲಿ ಡಾ.ಧನಂಜಯ ಸರ್ಜಿಯವರು ನಮ್ಮ ಸಂಘದ ಸದಸ್ಯರಿಗೆ ಆರೋಗ್ಯ ಕಾರ್ಡ್ ಒದಗಿಸಿದ್ದಾರೆ. ಈ ಮೂಲಕ ಸರ್ಜಿ ಆಸ್ಪತ್ರೆಯಲ್ಲಿ ನಮಗೆ ವಿವಿಧ ರಿಯಾಯಿತಿ ಸೌಲಭ್ಯವನ್ನು ನೀಡಿದ್ದಾರೆ. ಪತ್ರಕರ್ತರು ಧ್ಯಾನ, ಯೋಗದ ಮೂಲಕವೂ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. 

ಪತ್ರಕರ್ತರಿಗೆ ಆರೋಗ್ಯ ಕಾರ್ಡ್ ವಿತರಿಸಿ ಮಾತನಾಡಿದ ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ ಮಾತನಾಡಿ, ಎಷ್ಟೇ ಹಣ ಸಂಪತ್ತು ಇದ್ದರೂ ಆರೋಗ್ಯವಿಲ್ಲದಿದ್ದರೆ ಏನೂ ಪ್ರಯೋಜನವಿಲ್ಲ. ಪತ್ರತರ್ಕರು ಸಮಾಜದಲ್ಲಿ ತಮ್ಮ ಆರೋಗ್ಯವನ್ನು ಬದಿಗಿಟ್ಟು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಮತ್ತು ಅವರ ಕುಟುಂಬಕ್ಕೆ ಅಗತ್ಯ ನೆರವು ನೀಡಲು ನಗರಸಭೆ ಬದ್ಧವಾಗಿದೆ ಎಂದರು. 

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಪತ್ರಿಕೆಯೊದು ಮುದ್ರಣವಾದ ನಂತರ ಓದುಗರ ಕೈ ತಲುಪುವಲ್ಲಿ ವಿತರಕರ ಪಾತ್ರ ಬಹು ಮುಖ್ಯ. ಅವರಿಗೂ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಪತ್ರಕರ್ತರೂ ಸಮಾಜಮುಖಿಯಾಗಿ ಕೆಲಸ ಮಾಡುವುದರಿಂದ ಅವರಿಗೆ ವಿಮೆ ಸೌಲಭ್ಯವನ್ನು ಸರ್ಕಾರವೇ ನೀಡಬೇಕು. ಕಾರ್ಮಿಕ ಇಲಾಖೆಯಡಿ ಪತ್ರಕರ್ತರನ್ನೂ ಪರಿಗಣಿಸಿ ಅವರಿಗೆ ಸಿಗಬೇಕಾದ ಆರೋಗ್ಯ ಸೌಲಭ್ಯ, ಮಕ್ಕಳಿಗೆ ಶಿಕ್ಷಣ ಒದಗಿಸಲು ಸರ್ಕಾರ ನೆರವಾಗಬೇಕು ಎಂದು ಒತ್ತಾಯಿಸಿದರು. 

ಸರ್ಕಾರ ಜಾರಿಗೆ ತಂದಿರುವ ಕೆಲವು ಕಾರ್ಡುಗಳು ದೊಡ್ಡ ಆಸ್ಪತ್ರೆಯಲ್ಲಿ ಉಪಯೋಗಕ್ಕೆ ಬರುವುದಿಲ್ಲ. ದೊಡ್ಡ ಕಾಯಿಲೆಗೆ ತುತ್ತಾಗಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದರೆ ಯಾವ ಕಾರ್ಡೂ ನೆರವಿಗೆ ಬರುವುದಿಲ್ಲ. ಆಸ್ಪತ್ರೆಯ ಲಾಬಿಯಿಂದ ರೋಗಿ ಬದುಕುವುದೇ ಕಷ್ಟವಾಗುತ್ತದೆ. ಕೆಲವು ಸಂದರ್ಭದಲ್ಲಿ ಜೀವವೂ ಹೋಯಿತು, ಹಣವೂ ಹೋಯಿತು ಎಂಬಂತಾಗುತ್ತದೆ. ಖಾಸಗಿ ಆಸ್ಪತ್ರೆಗಳ ಲಾಬಿಯನ್ನು ಯಂತ್ರಿಸಲು ಸರ್ಕಾರ ಹೊಸ ಕಾನೂನು ಜಾರಿಗೆ ತರಬೇಕು ಎಂದು ಅಭಿಪ್ರಾಯಪಟ್ಟರು. 

ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ರಮೇಶ್ ಎನ್. ಮಾತನಾಡಿ, ಪ್ರಸ್ತುತ ದಿನಮಾನದಲ್ಲಿ ಪತ್ರಿಕಾ ವಿತರಣೆ ಅತ್ಯಂತ ಕಷ್ಟದ ಕೆಲಸವಾಗಿದೆ. ವಿತರಣೆಗೆ ಯಾರೂ ಬರುತ್ತಿಲ್ಲ. ಅವರಿಗೆ ಏನಾದರೂ ಅವಘಡವಾದಲ್ಲಿ ಯಾವ ಕಂಪಯೂ ನೆರವಿಗೆ ಬರುವುದಿಲ್ಲ. ಕೆಲವು ಗ್ರಾಹಕರೂ ವಿತರಣೆ ಬಗ್ಗೆ ಅಸಡ್ಡೆ ತೋರುತ್ತಾರೆ. ಮನೆ ಬಾಗಿಲಿಗೆ ಹಾಲು, ಗ್ಯಾಸ್ ತರುವವರಿಗೆ ಹೆಚ್ಚು ಹಣ ಕೊಡುವ ಗ್ರಾಹಕರು ಪತ್ರಿಕೆ ಏಜೆಂಟರು ೧೦ ರೂ. ಹೆಚ್ಚು ಕೇಳಿದರೆ ಪೇಪರ್ ಬೇಡ ಎನ್ನುವ ಮನೋಭಾವ ವ್ಯಕ್ತಪಡಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು. 

ಸಂಘದ ಅಧ್ಯಕ್ಷ ರಮೇಶ್ ಹೆಗಡೆ ಗುಂಡೂಮನೆ ಅಧ್ಯಕ್ಷತೆ ವಹಿಸಿದ್ದರು. 

ನಗರಸಭೆ ಸದಸ್ಯ ಆರ್.ಶ್ರೀನಿವಾಸ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಟ್ರಸ್ಟ್ ಅಧ್ಯಕ್ಷ ಎಚ್.ವಿ.ರಾಮಚಂದ್ರರಾವ್ ಮಾತನಾಡಿದರು. ನಗರಸಭೆ ಸದಸ್ಯೆ ಪ್ರೇಮಾ ಕಿರಣ್ ಸಿಂಗ್, ಸವಿತಾ ವಾಸು, ಟ್ರಸ್ಟ್ ನ ಎ.ಡಿ.ಸುಬ್ರಹ್ಮಣ್ಯ, ಎ.ಡಿ.ರಾಮಚಂದ್ರ ಭಟ್ ಮತ್ತಿತರರು ಹಾಜರಿದ್ದರು. 

ಸಂಘದ ಕಾರ್ಯದರ್ಶಿ ಗಣಪತಿ ಶಿರಳಗಿ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷ ರಾಜೇಶ್ ಭಡ್ತಿ ವಂದಿಸಿದರು. ಟ್ರಸ್ಟ್ ಕಾರ್ಯದರ್ಶಿ ಎಸ್.ವಿ.ಹಿತಕರ ಜೈನ್ ನಿರೂಪಿಸಿದರು.ಹಿರಿಯ ಪತ್ರಕರ್ತರುಗಳಾದ ಎ.ಡಿ.ರಾಮಚಂದ್ರ ಭಟ್,ಎ.ಡಿ.ಸುಬ್ರಹ್ಮಣ್ಯಭಟ್,ಗಣಪತಿ ಕೆಳದಿ,ಪ್ರಶಾಂತ್ ಮನೋಭೂಮಿ,ಸತ್ಯನಾರಾಯಣ,ರವಿ,ಶೈಲೇಂದ್ರ,ಧರ್ಮರಾಜ್ ಮೊದಲಾದವರು ಉಪಸ್ಥಿತರಿದ್ದರು.