ಸಹಖೈದಿಯ ಪತ್ನಿಯಿಂದಲೇ ಹಣವಸೂಲಿ ಮಾಡಿ ಸಿಕ್ಕಿಬಿದ್ದ ಖೈದಿಮಿತ್ರರು
ಶಿವಮೊಗ್ಗ: ಜೈಲಿನಲ್ಲಿ ನಿನ್ನ ಪತಿಗೆ ಅಪಾಯವಿದೆ. ಆ ಅಪಾಯ ತಪ್ಪಿಸಲು ಹಣ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದ ಪ್ರಕರಣವೊಂದು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪೋಕ್ಸೋ ಕಾಯ್ದೆ ಅಡಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿಯ ಪತ್ನಿಗೆ ಜೈಲಿನಲ್ಲಿಯೇ ಇದ್ದ ಇತರೆ ಖೈದಿಗಳಿಂದ ಹಣದ ಬೇಡಿಕೆಯಿಟ್ಟು ಹಣ ಪಡೆದಿದ್ದವರೇ ಮತ್ತೆ ಹಣ ವಸೂಲಾತಿಗೆ ಮುಂದಾಗಿದ್ದ ಕಾರಣ ನಾಲ್ವರ ವಿರುದ್ಧ ಖೈದಿಯ ಪತ್ನಿ ದೂರು ದಾಖಲಿಸಿದ್ದಾರೆ.
ಆ.18 ರಂದು ಉಡುಪಿ ಜಿಲ್ಲೆಯ ಬಾಳಕುದ್ರು ಗ್ರಾಮದ ಅಶೋಕ್ ಪೂಜಾರಿಯ ವಿರುದ್ಧ ಪೊಕ್ಸೋ ಪ್ರಕರಣವೊಂದು ದಾಖಲಾಗಿದ್ದು, ನ್ಯಾಯಾಲಯ ಅವರಿಗೆ 20 ವರ್ಷ ಸಜೆಯನ್ನು ವಿಧಿಸಿದೆ. ಇದರ ವಿರುದ್ಧ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ. ಮೇಲ್ಮನವಿಯ ನಡುವೆ ಅಶೋಕ್ ಪೂಜಾರಿಯನ್ನು ಉಡುಪಿಯಿಂದ ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸಲಾಗಿದೆ.
ಇತ್ತೀಚೆಗೆ ಪತಿ ಅಶೋಕ್ ಪೂಜಾರಿ ಪತ್ನಿಗೆ ಕರೆ ಮಾಡಿದ ದಿನವೇ ಜೈಲಿನಲ್ಲಿದ್ದ ಮತ್ತೋರ್ವ ಖೈದಿ ಶಶಿ ಪೂಜಾರಿ ಕರೆ ಮಾಡಿ ನಿಮ್ಮ ಪತಿಯನ್ನು ಕೆಳಗಡೆಯ ಸೆಲ್‌ಗೆ ಹಾಕಲಾಗುತ್ತಿದೆ. ಕೆಳಗಡೆ ಸೆಲ್‌ಗೆ ಹಾಕಿದರೆ ಕಷ್ಟವಾಗುತ್ತದೆ. ಹಣ ಕೊಟ್ಟರೆ ಕೆಳಗಡೆ ಸೆಲ್‌ನ್ನು ತಪ್ಪಿಸಬಹುದು ಎಂದು ಹೇಳಿದ್ದನು. ಶಶಿ ಪೂಜಾರಿಯ ಕರೆಯ ಬೆನ್ನಲ್ಲೇ ಅಲಿ ಎಂಬ ಮತ್ತೋರ್ವ ಕರೆ ಮಾಡಿ ಹಣದ ಬೇಡಿಕೆ ಇಟ್ಟಿದ್ದು ಇಬ್ಬರೂ ಸಹ ಎಂ.ಡಿ.ಯೂಸುಫ್ ನ ಮೊಬೈಲ್ ನಂಬರ್‌ಗೆ ಗೂಗಲ್ ಪೇ ಮೂಲಕ ಹಣಹಾಕಲು ಒತ್ತಾಯ ಮಾಡಿದ್ದರೆ.
ನೀವು ಶಿವಮೊಗ್ಗಕ್ಕೆ ಬಂದಾಗ ಮತ್ತೊಂದು ಮೊಬೈಲ್ ನಂಬರ್ ಗೆ ಕರೆ ಬರುತ್ತದೆ. ಅವರಿಗೆ ೨೨ ಸಾವಿರ ರೂ. ಹಣ ಹಾಕುವಂತೆಯೂ ಸೂಚಿಸಿದ್ದರು. ಪತಿಗೆ ಕಷ್ಟವಾಗದಂತೆ ತಡೆಯಲು ಮುಂದಾದ ಪತ್ನಿ ಅಲಿ ಮತ್ತು ಶಶಿ ಪೂಜಾರಿ ಹೇಳಿದ ಮೊಬೈಲ್ ನಂಬರ್ ಗೆ ೧೬೫೦೦ ರೂ. ಮತ್ತು ಮರುದಿನ ೩೩ ಸಾವಿರ ರೂ. ಹಣ ಸೇರಿ 49500 ರೂ. ಗೂಗಲ್ ಪೇ ಮಾಡಿದಳು.
ಆಗಸ್ಟ್ 21 ಕ್ಕೆ ಶಿವಮೊಗ್ಗಕ್ಕೆ ಬಂದಾಗ ಅಪರಿಚಿತ ಮೊಬೈಲ್ ನಂಬರ್‌ನವನು ಕರೆ ಮಾಡಿ ಪೂಜಾರಿಯ ಪತ್ನಿಯನ್ನು ಭೇಟಿಯಾಗಿದ್ದು ಅವರಿಗೆ 22 ಸಾವಿರ ರೂ. ಹಣ ಹಾಕಿದ್ದಾರೆ. ಇತ್ತ ಕಾರಾಗೃಹಕ್ಕೆ ಹೋದಾಗ ಪತಿ ಅಶೋಕ್ ಪೂಜಾರಿ ತನ್ನ ಸಹಖೈದಿಗಳಾದ ಶಶಿ ಪೂಜಾರಿ, ಅಲಿ ಮತ್ತು ಪ್ರಮೋದ್ ಅವರನ್ನು ಪರಿಚಯಿಸಿಕೊಟ್ಟಿದ್ದನು.
ಊರಿಗೆ ವಾಪಾಸಾದ ನಂತರ ಸೆ.೪ ರಂದು ಮತ್ತೊಬ್ಬ ಕರೆ ಮಾಡಿ ನಿಮ್ಮ ಪತಿ ಅಸಹಾಯಕನಾಗಿದ್ದಾನೆ. ಸಹಾಯ ಮಾಡಲು ಮತ್ತೆ ಹಣ ಬೇಕು ಎಂದು ಬೇಡಿಕೆ ಇಟ್ಟಿದ್ದನು. ಇದರಿಂದ ಎಚ್ಚೆತ್ತುಕೊಂಡ ಖೈದಿಯ ಪತ್ನಿ ಶಶಿ ಪೂಜಾರಿ, ಅಲಿ, ಪ್ರಮೋದ್ ಮತ್ತು ಅಪರಿಚಿತ ನಂಬರ್ ಮೂಲಕ ಮೋಸ ಮಾಡುತ್ತಿದ್ದಾರೆ ಎಂದರಿತು ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ನಡೆಯುತ್ತಿದೆ.