ಶಿಕಾರಿಪುರ ನೂತನ ಪಶು ಆಸ್ಪತ್ರೆಗೆ ಅಡಿಗಲ್ಲು

ಶಿಕಾರಿಪುರ ನೂತನ ಪಶು ಆಸ್ಪತ್ರೆಗೆ ಅಡಿಗಲ್ಲು

ಶಿಕಾರಿಪುರ ಸೆ,13 : ಬಿಜೆಪಿ ಸರ್ಕಾರದ ಅವಯಲ್ಲಿ ರಾಜ್ಯದ ಮುಖ್ಯಮಂತ್ರಿ ಯಾಗಿದ್ದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರು ಹಾಲು ಉತ್ಪಾದಕ ರೈತರಿಗೆ ಪ್ರತಿ ಲೀಟರಿಗೆ 2 ರೂಪಾಯಿ ಪ್ರೋತ್ಸಾಹ ಧನ ನೀಡಿದರು. ಇದರಿಂದಾಗಿ ರಾಜ್ಯದ ಹೈನುಗಾರಿಕಾ ರೈತರಿಗೆ ಹೆಚ್ಚಿನ ಉತ್ತೇಜನ ನೀಡಿದಂತಾಗಿದೆ ಎಂದು   ಶಾಸಕ ಬಿ ವೈ ವಿಜಯೇಂದ್ರ ತಿಳಿಸಿದರು.

ಪಟ್ಟಣದ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಆಸ್ಪತ್ರೆ ಯ ಆವರಣದಲ್ಲಿ   ನೂತನ ಪಶು ಆಸ್ಪತ್ರೆ ಕಟ್ಟಡದ ಅಡಿಗಲ್ಲು ಹಾಗೂ ತುರ್ತು ಚಿಕಿತ್ಸಾ ವಾಹನದ ಲೋಕಾರ್ಪಣೆ ಕಾರ್ಯಕ್ರಮದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.

 ಬರಗಾಲದ ಇಂದಿನ ವಾತಾವರಣದಲ್ಲಿ ರೈತರು ಕೃಷಿ ಚಟುವಟಿಕೆಗಳಿಗೆ ಒತ್ತು ನೀಡಲಾಗದೇ ಕಂಗಾಲಾಗಿರುವ ರೈತರು ಹೈನುಗಾರಿಕೆಗೆ ಹೆಚ್ಚಿನ ಒತ್ತು ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.  ತಾಲೂಕಿನಲ್ಲಿ ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಪ್ರತಿನಿತ್ಯ 38 ಲಕ್ಷ ರೂಪಾಯಿ ಜಮೆಯಾಗುತ್ತಿದೆ.  . ತಾಲ್ಲೂಕಿನ ರೈತರು ದನಕರುಗಳ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳಿ, ಧಾರವಾಡ ಮತ್ತು ಬೆಂಗಳೂರಿನ ಕೋಣನ ಕುಂಟೆಗೆ ಹೋಗಬೇಕಿತ್ತು. ಈ ಆಸ್ಪತ್ರೆಯು ಯಾವುದೇ ಕಾರಣಕ್ಕೂ ಕಳಪೆ ಗುಣಮಟ್ಟದ ಆಸ್ಪತ್ರೆಯಾಗಬಾರದು. ಗ್ರಾಮೀಣ ಪ್ರದೇಶ ಗಳಲ್ಲಿನ ರೈತರ ಪಶುಗಳಿಗೆ ಪಶುಪಾಲನಾ ಇಲಾಖೆಯ ವೈದ್ಯರು ಕೂಡಲೆ ಸ್ಪಂದಿಸಿ ಅಲ್ಲಿನ ಪಶುಗಳಿಗೆ ಉತ್ತಮ ಚಿಕಿತ್ಸೆನೀಡಬೇಕು ಎಂದು ಗುತ್ತಿಗೆದಾರರಿಗೆ ಹಾಗೂ ವೈದ್ಯಾಕಾರಿಗಳಿಗೆ ಎಚ್ಚರಿಕೆ ನೀಡಿದರು.

ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದ ಪಾಲಾಕ್ಷಪ್ಪ, ರೇಣುಕ್ ಸ್ವಾಮಿ ಮಾಜಿ ಎಂಎಡಿಬಿ ಅದ್ಯಕ್ಷ ಕೆ ಎಸ್ ಗುರುಮೂರ್ತಿ, ಜಿಲ್ಲಾ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಶಿವಯೋಗಿ ಎಲ್ ಇ, ಪಾಲಿಕ್ಲೀನಿಕ್ ವೈದ್ಯ ಬಸವರಾಜ್ ಹೂವಗಾರ್, ತಾಲ್ಲೂಕು ಪಶು ವೈದ್ಯ ರವಿಕುಮಾರ್ ಎಂ ಬಿ, ಬಿಜೆಪಿ ಪಕ್ಷದ ಮುಖಂಡರಾದ ಕೆ ಹಾಲಪ್ಪ, ಚನ್ನವೀರಪ್ಪ ಸೇರಿದಂತೆ ವಿವಿಧ ಗ್ರಾಮಗಳ ಪಶು ವೈದ್ಯರು, ಇಲಾಖೆಯ ಸಿಬಂದಿಗಳು ಹಾಜರಿದ್ದರು.