ದಾವಣಗೆರೆ: ಮಾಯಕೊಂಡ ಠಾಣಾ ವ್ಯಾಪ್ತಿಯ ನಲ್ಕುಂದ ಗ್ರಾಮದಲ್ಲಿ ಮೂಢನಂಬಿಕೆ ಹಿನ್ನೆಲೆಯಲ್ಲಿ ಹೂತಿದ್ದ ಶವ ಮೇಲೆತ್ತಿ ಅಗ್ನಿಸ್ಪರ್ಷ ಮಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಸಮುದಾಯಗಳ ನಡುವೆ ಗಲಾಟೆ ನಡೆದಿದ್ದು, ಘಟನೆ ಸಂಬಂಧ 28 ಜನರನ್ನು ಬಂಧಿಸಲಾಗಿದೆ.
ಘಟನೆ ಹಿನ್ನೆಲೆ ಏನು...?
ಕಳೆದ ತಿಂಗಳು 4 ನೇ ತಾರೀಖಿನಂದು ನಲ್ಕುಂದ ಗ್ರಾಮದ 60 ವರ್ಷದ ಲಕ್ಷ್ಮೀದೇವಿ ಅವರು ವಯೋಸಹಜ ಖಾಯಿಲೆಯಿಂದ ಮೃತಪಟ್ಟಿದ್ದರು. ಅವರ ಜಾಗದಲ್ಲಿಯೇ ಮೃತದೇಹ ಮಣ್ಣು ಮಾಡಲಾಗಿತ್ತು. ಆದ್ರೆ, ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಳೆಯಾಗಿತ್ತು. ಆದ್ರೆ, ನಲ್ಕುಂದ ಗ್ರಾಮದಲ್ಲಿ ಮಾತ್ರ ಮಳೆಯಾಗಿರಲಿಲ್ಲ. ಇದರಿಂದಾಗಿ ಗ್ರಾಮಸ್ಥರೆಲ್ಲರೂ ಸೇರಿಕೊಂಡು ಮೃತಪಟ್ಟಿದ್ದ ಲಕ್ಷ್ಮೀದೇವಿಗೆ ತೊನ್ನು ಇದ್ದ ಕಾರಣ ಅವರನ್ನು ಮಣ್ಣು ಮಾಡಲಾಗಿದೆ. ಈ ಕಾರಣದಿಂದಾಗಿ ಗ್ರಾಮದಲ್ಲಿ ಮಳೆಯಾಗುತ್ತಿಲ್ಲ. ಆದ್ದರಿಂದ ಮೃತ ಲಕ್ಷ್ಮೀದೇವಿಯವರ ಶವವನ್ನು ಹೊರ ತೆಗೆದು ಸುಡಲು ತೀರ್ಮಾನಿಸಿದರು.
ಮಣ್ಣು ಮಾಡಿದ್ದ ಶವವನ್ನು ಮೇಲಕ್ಕೆತ್ತಲು ನಿರ್ದಿಷ್ಟ ಸಮುದಾಯದವರೇ ಮೇಲಕ್ಕೆತ್ತಬೇಕು ಎಂದು ಹೇಳಲಾಯಿತು. ಈ ಕಾರಣಕ್ಕೆ ಎರಡು ಸಮುದಾಯಗಳ ನಡುವೆ ಮಾತಿನ ಚಕಮಕಿ ನಡೆದು ಅದು ವಿಕೋಪಕ್ಕೆ ಹೋಗಿದೆ.
ಸೆಪ್ಟಂಬರ್ 2 ರಂದು ಸಂಜೆ ಲಕ್ಷ್ಮೀದೇವಿಯ ಮೃತದೇಹವನ್ನು ಹೊರ ತೆಗೆದು ಅದೇ ಜಾಗದಲ್ಲಿ, ಸುಡುವ ಸಮಯದಲ್ಲಿ ನಲ್ಕುಂದ ಗ್ರಾಮದ ಸ್ವಾಮಿ ಮತ್ತು ನವೀನ್ ಕುಮಾರ್ ರವರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿತ್ತು. ಇದೇ ವಿಷಯವನ್ನು ಮುಂದುವರೆಸಿಕೊಂಡು ಎರಡು ಸಮುದಾಯಗಳ ನಡುವೆ ನಲ್ಕುಂದ ಗ್ರಾಮದ ದುರುಗಮ್ಮ ದೇವಸ್ಥಾನದ ಬಳಿ ಜಗಳವಾಗಿದೆ. ಹೊಡೆದಾಟವೂ ನಡೆದಿದೆ. ವಾದ - ವಿವಾದದ ಸಂದರ್ಭದಲ್ಲಿ ಗ್ರಾಮದ ಸಿದ್ದೇಶ್ ಎಂಬುವವರ ಮೇಲೆ ಹಲ್ಲೆ ನಡೆದಿತ್ತು. ಗಾಯಗೊಂಡಿರುವ ಅವರನ್ನು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 28 ಮಂದಿಯನ್ನು ಬಂಧಿಸಲಾಗಿದೆ.
ಘಟನೆ ನಡೆದ ಸ್ಥಳಕ್ಕೆ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಎಎಸ್ಪಿ ಆರ್. ಬಿ. ಬಸರಗಿ, ಡಿವೈಎಸ್ಪಿ ಬಸವರಾಜ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿದರು. ಎರಡು ಸಮುದಾಯಗಳಿಗೂ ಶಾಂತಿ ಕಾಪಾಡುವಂತೆ ಮನವಿ ಮಾಡಿದರು.
ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ ಉಮಾ ಪ್ರಶಾಂತ್ ಅವರು, ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಬಂದೋಬಸ್ ಮಾಡಲಾಗಿದೆ. ಮೂಢನಂಬಿಕೆ ಹಿನ್ನೆಲೆಯಲ್ಲಿ ಹೂತಿದ್ದ ಶವವನ್ನು ಮೇಲಕ್ಕೆತ್ತಿ ಸುಡಲಾಗಿದೆ. ಸದ್ಯ ಪರಿಸ್ಥಿತಿ ಶಾಂತವಾಗಿದೆ. ಭದ್ರತೆಯನ್ನೂ ಹೆಚ್ಚಿಸಲಾಗಿದೆ. ಗ್ರಾಮದಲ್ಲಿ ಮೌಢ್ಯಾಚರಣೆ ಅನುಸರಿಸದಂತೆ ಗ್ರಾಮಸ್ಥರಲ್ಲಿ ಜಾಗೃತಿ ಮತ್ತು ಅರಿವು ಮೂಡಿಸಲಾಗುವುದು ಎಂದು ಎಸ್ಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.