ಶಂಕರಮಠ, ಶುಭಮಂಗಳದಲ್ಲಿ ಹೋಮ, ಹವನ

ನ. 25-27 : ನಗರಕ್ಕೆ ಶೃಂಗೇರಿ ಮಠದ ಸ್ವಾಮೀಜಿ

ಶಂಕರಮಠ, ಶುಭಮಂಗಳದಲ್ಲಿ ಹೋಮ, ಹವನ

ಶಿವಮೊಗ್ಗ: ಶೃಂಗೇರಿ ಶಂಕರಮಠದ ವಿಧುಶೇಖರ ಭಾರತಿ ಸ್ವಾಮೀಜಿ ನ. 25-27 ರವರೆಗೆ ಮೂರು ದಿನಗಳ ಕಾಲ ಶಿವಮೊಗ್ಗದ ವಿವಿಧ ಕಾರ್‍ಯಕ್ರಮಗಳಲ್ಲಿ  ಪಾಲ್ಗೊಳ್ಳಲಿದ್ದಾರೆ.

ಈ ಸಂದರ್ಭದಲ್ಲಿ  26 ಮತ್ತು 27 ರಂದು ಧಾರ್ಮಿಕ ಕಾರ್‍ಯಕ್ರಮ, ಆಶೀರ್ವಚನವನ್ನು ಶುಭಮಂಗಳದಲ್ಲಿ ಶ್ರೀಗಂಧ ಸಂಸ್ಥೆಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಶಾಸಕ ಕೆ. ಎಸ್. ಈಶ್ವರಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಶಿವಮೊಗ್ಗದ ಶೃಂಗೇರಿ ಶಂಕರಮಠ, ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ, ಶನೈಶ್ವರ ದೇವಾಲಯ ಸಮಿತಿ ಟ್ರಸ್ಟ್  ಇವರ ಸಂಯುಕ್ತಾಶ್ರಯದಲ್ಲಿ ಈ ಕಾರ್‍ಯಕ್ರಮ ರೂಪಿಸಲಾಗಿದೆ. ನ. 26 ರಂದು ಸಂಜೆ 5:30 ಕ್ಕೆ ವಿನೋಬನಗರ ಡಿವಿಎಸ್ ಕಾಲೇಜಿನಿಂದ ಶುಭಮಂಗಳದವರೆಗೆ ಮಂಗಳವಾದ್ಯ, ಪೂರ್ಣಕುಂಭ ಸ್ವಾಗತದೊಂದಿಗೆ ಸ್ವಾಮೀಜಿಯ ಭವ್ಯ ಶೋಭಾಯಾತ್ರೆ ನಡೆಯಲಿದೆ. 6:30 ರಿಂದ ಸ್ವಾಮೀಜಿಯಿಂದ ಅನುಗ್ರಹ ಭಾಷಣ, ಪಾದಪೂಜೆ, ಗುರುವಂದನೆ, ಗುರುಭಕ್ತರಿಗೆ ಗೌರವ ಸಮರ್ಪಣೆ ನಡೆಯಲಿದೆ ಎಂದರು.

ಅಂದು ರಾತ್ರಿ 8:30 ರಿಂದ ಶಂಕರಮಠದಲ್ಲಿ ಚಂದ್ರಮೌಳೇಶ್ವರ ದೇವರಿಗೆ ಸ್ವಾಮೀಜಿಯಿಂದ ಪೂಜೆ ನಡೆಯಲಿದೆ.

ನಂತರ ಪ್ರಸಾದ ವಿನಿಯೋಗವಿರುತ್ತದೆ. ೨೭೧ರಂದು ಲೋಕಕಲ್ಯಾಣಾರ್ಥವಾಗಿ ಬೆಳಗ್ಗೆ ೬ರಿಂದ ಶಂಕರಮಠದಲ್ಲಿ ಸಹಸ್ರ ಮೋದಕ ಗಣಹೋಮ ನಡೆಯಲಿದ್ದು, ೯:೩೦ಕ್ಕೆ ಸ್ವಾಮೀಜಿ ಸಾನಿಧ್ಯದಲ್ಲಿ ಪೂರ್ಣಾಹುತಿಯೊಂದಿಗೆ ಮುಕ್ತಾಯವಾಗಲಿದ ಎಂದು ವಿವರಿಸಿದರು. ಆಮೇಲೆ ೧೧:೩೦ಕ್ಕೆ ಸ್ವಾಮೀಜಿ ಸಾನಿಧ್ಯದಲ್ಲಿ ಶುಭಮಂಗಳದಲ್ಲಿ ಸಹಸ್ರ ನಾರಿಕೇಳ ಗಣಯಾಗ ನಡೆಯಲಿದೆ. ಪಾದಪೂಜೆ, ದರ್ಶನ, ಭಿಕ್ಷಾವಂದನೆ ಇರುತ್ತದೆ. ಮಧ್ಯಾಹ್ನ 1 ರಿಂದ ಪ್ರಸಾದ ವಿನಿಯೋಗವಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ನಟರಾಜ ಭಾಗವತ, ಎಸ್. ದತ್ತಾತ್ರಿ, ಮಧುಸೂದನ್, ವಿ. ರಾಜು, ಸ. ನ. ಮೂರ್ತಿ ಮೊದಲಾದವರಿದ್ದರು. 

ರಾಜ್ಯದಲ್ಲಿ ಘೋರವಾದ ಅತಿವೃಷ್ಟಿ ಅನಾವೃಷ್ಟಿ ದಾರುಣ ಭೂಕಂಪ ಶತ್ರುಗಳ ಆಕ್ರಮಣ ಇತ್ಯಾದಿ ವಿಪತ್ತುಗಳು ಉಂಟಾದಾಗ ಮತ್ತು ದೇಹದಲ್ಲಿ ಕ್ಷಯ ಮೊದಲಾದ ಮಹಾ ರೋಗಗಳು ಉಂಟಾದಾಗ ಮತ್ತು ಮಹೋಪಘಾತಗಳುಂಟಾದಾಗ ಅವುಗಳ ಪರಿಹಾರಕ್ಕಾಗಿ ಹಾಗೂ ದೀರ್ಘಾಯುಷ್ಯ ಉತ್ತಮ ಸಂತತಿ ಮತ್ತು ದೇಶದೆಲ್ಲೆಡೆ ಸರ್ವತ್ರ ಶಾಂತಿ ನೆಲೆಸುವಂತಾಗಲು ಸದಾ ಯಶಸ್ಸು ಜಯ ಪಡೆಯಲು ದೇವಪೂಜಿತನಾದ ಗಣಪತಿಯನ್ನು ಸಹಸ್ರ ನಾರೀಕೇಳ ಗಣಯಾಗದ ಮೂಲಕ ಸಂತೋಷಪಡಿಸಿ ಆತನಿಂದ ಸತ್ಕರ್ಮವನ್ನು ಪಡೆಯಲು ಶಾಸ್ತ್ರಯುಕ್ತವಾಗಿ ಈ ಯಾಗವನ್ನು ನಡೆಸಲಾಗುತ್ತಿದೆ.

- ಕೆ ಎಸ್. ಈಶ್ವರಪ್ಪ, ಶಾಸಕ.