ಲೋಕಾಯುಕ್ತರನ್ನು ಕಂಡು ಲಂಚದ ಹಣವನ್ನು ಸುಟ್ಟುಹಾಕಿದ ಪಪಂ ಸದಸ್ಯ

ಲೋಕಾಯುಕ್ತರನ್ನು ಕಂಡು ಲಂಚದ   ಹಣವನ್ನು ಸುಟ್ಟುಹಾಕಿದ ಪಪಂ ಸದಸ್ಯ

ಶಿವಮೊಗ್ಗ: ತಾನು  ಲಂಚದ ಹಣವನ್ನು ಪಡೆಯುತ್ತಿರುವುದನ್ನು  ಹಿಡಿಯಲು ಲೋಕಾಯುಕ್ತರು ತನ್ನ ಮನೆಗೆ ಬರುತ್ತಿರುವುದನ್ನು ಕಂಡ ಪಟ್ಟಣ ಪಂಚಾಯತಿ ಸದಸ್ಯನೊಬ್ಬ ತನ್ನಲ್ಲಿದ್ದ ಆ ಹಣವನ್ನು ಮನೆಯ ಗ್ಯಾಸ್ ಸ್ಟವ್ ಹಚ್ಚಿ ಸುಟ್ಟುಹಾಕಿದ ವಿಚಿತ್ರ ಘಟನೆ  ಜೋಗದಲ್ಲಿ ಸಂಭವಿಸಿದೆ.

ಲೋಕಾಯುಕ್ತರು ಹಣ ಸುಟ್ಟಿರುವ ಪಪಂ ಸದಸ್ಯ  ಕೆ. ಸಿ. ಹರೀಶ್ (48) ನನ್ನು ಬಂಧಿಸಿದ್ದಾರೆ.

ಘಟನೆಯ ವಿವರ: 

ಜೋಗದ ಬಜಾರ್ ಲೈನಿನ ನಿವಾಸಿ ಅಹ್ಮದ್ ಅಬ್ದುಲ್ ಬಿನ್ ಉನ್ನಿನ್ ಕುಟ್ಟಿ ಇವರು ಪಪಂ ಜಾಗದಲ್ಲಿ 15 ವರ್ಷದಿಂದ ಕೋಳಿ ಮಾಂಸ ಮಾರಾಟ ಮಾಡುತ್ತಿದ್ದು, ಈ ಅಂಗಡಿಗೆ ಲೈಸೆನ್ಸ್ ಇರಲಿಲ್ಲ. ಇತ್ತೀಚೆಗೆ  ಪಪಂನವರು ಅಂಗಡಿ ತೆರವುಗೊಳಿಸಲು ಸೂಚನೆ ಕೊಟ್ಟಿದ್ದರು. ಆದರೆ ತನಗೆ ಪರವಾನಿಗೆ ಕೊಡುವಂತೆ ಅಬ್ದುಲ್ ನ. 14 ರಂದು ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಆದರೆ ಪರವಾನಿಗೆ ಕೊಟ್ಟಿರಲಿಲ್ಲ. ಮತ್ತೆ ಅಂಗಡಿ ತೆರವುಗೊಳಿಸಲು ಮುಂದಾದ ವೇಳೆ ಆ ವಾರ್ಡಿನ ಸದಸ್ಯ ಕೆ. ಸಿ ಹರೀಶ್ ಎನ್ನುವವರಲ್ಲಿಗೆ ಹೋಗಿ ಈ ವಿಚಾರ ಪ್ರಸ್ತಾಪಿಸಿದ್ದನು.

ಆಗ ಹರೀಶ್ ಪ್ರತಿ ತಿಂಗಳು ತನಗೆ 3 ಸಾವಿರ ರೂ ಕೊಟ್ಟರೆ ಉಳಿಸುವುದಾಗಿ ಹೇಳಿದ್ದರು. ಇಷ್ಟು ಹಣ ಕೊಡುತ್ತಾ ಹೋಗಲು ಸಾಧ್ಯವಿಲ್ಲ ಎಂದಾಗ ಒಮ್ಮೆಲೆ 50 ಸಾವಿರ ರೂ. ಕೊಡು. ಯಾರೂ ನಿನ್ನ ತಂಟೆಗೆ ಬಾರದಂತೆ ಮಾಡುತ್ತೇನೆ ಎಂದಿದ್ದರು. ಈ ವಿಷಯವನ್ನು ಅಬ್ದುಲ್ ಲೋಕಾಯುಕ್ತರಿಗೆ ತಿಳಿಸಿದ್ದರು.

ಸೋಮವಾರದಂದು  ಅಬ್ದುಲ್ ಅವರಿಂದ ಹರೀಶ್ ತನ್ನ ಮನೆಯಲ್ಲಿ  50 ಸಾವಿರ ರೂ. ನಗದು ಹಣ ಪಡೆಯುತ್ತಿರುವಾಗ ಲೋಕಾಯುಕ್ತರು ದಾಳಿ ಮಾಡಲು ಬರುತ್ತಿರುವದನ್ನು ಕಂಡ ಹರೀಶ್ ಗ್ಯಾಸ್ ಸ್ಟವ್ ಆನ್ ಮಾಡಿ ಎಲ್ಲ ಹಣವನ್ನು ಸುಟ್ಟಿದ್ದಾನೆ. ಕೂಡಲೇ ಆತನನ್ನು ಬಂಧಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.

 ಲೋಕಾಯುಕ್ತ ಇನ್ಸ್‌ಪೆಕ್ಟರ್ ರಾಧಾಕೃಷ್ಣ ಪ್ರಕರಣ ದಾಖಲಿಸಿದ್ದಾರೆ. ಡಿಎಸ್ಪಿ ಮೃತ್ಯುಂಜಯ, ಇನ್ಸಪೆಕ್ಟರ್ ಜಗನ್ನಾಥ, ಸಿಬ್ಬಂದಿಗಳಾದ  ಪ್ರಸನ್ನ, ಲೋಕೇಶಪ್ಪ, ಮಹಾಂತೇಶ್, ಚನ್ನೇಶ್, ಪ್ರಶಂತ್‌ಕುಮಾರ್ ಮೊದಲಾದವರಿದ್ದರು.