ಯೋಜನೆಗಳ ಅನುಷ್ಠಾನ: ಜನರಿಗೆ ಮಾಹಿತಿ ಕೊಡಿ ಅಧಿಕಾರಿಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಡಿಸಿ ಸೆಲ್ವಮಣಿ

ಯೋಜನೆಗಳ ಅನುಷ್ಠಾನ: ಜನರಿಗೆ  ಮಾಹಿತಿ ಕೊಡಿ    ಅಧಿಕಾರಿಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ  ಡಿಸಿ ಸೆಲ್ವಮಣಿ

ಶಿವಮೊಗ್ಗ : ಸೆಪ್ಟಂಬರ್ 20  :  ಗ್ರಾಮೀಣ ಜನರಲ್ಲಿ ಸ್ವಚ್ಚತೆ, ಆರೋಗ್ಯ, ನೈರ್ಮಲ್ಯ, ಅಪೌಷ್ಠಿಕತೆ ಕುರಿತು ಮಾಹಿತಿ ನೀಡಬೇಕಾದ ಅಗತ್ಯವಿದೆ.  ವಿಶೇಷವಾಗಿ ತಾಯಿ ಮಕ್ಕಳ ಆರೋಗ್ಯ ಸುರಕ್ಷತವಾಗಿರುವಲ್ಲಿ ಲಸಿಕೆಗಳು ನಿರಂತವಾಗಿರುವಂತೆ ನೋಡಿಕೊಳ್ಳುವ ಅಗತ್ಯವಿದೆ. ಇವುಗಳಿಂದಾಗಿ ಯೋಜನೆಗಳು ಪೂರ್ಣಪ್ರಮಾಣದಲ್ಲಿ ಅನುಷ್ಠಾನಕ್ಕೆ ಬರಲಿವೆ ಎಂದು  ಜಿಲ್ಲಾಧಿಕಾರಿ ಡಾ ಆರ್.ಸೆಲ್ವಮಣಿ ಹೇಳಿದರು.

ಸೋಮವಾರ ಜಿಲ್ಲಾ ಪಂಚಾಯಿತಿ, ನಗರಾಭಿವೃದ್ಧಿ ಯೋಜನೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಯುನಿಸೆಫ್ ಮತ್ತು ಐಐಹೆಚ್‌ಎಂಆರ್. ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪಂಚಾಯಿತಿಯ ಕೊಡಚಾದ್ರಿ ಸಭಾಂಗಣದಲ್ಲಿ ಸಂವಹನದಲ್ಲಿನ ಸವಾಲುಗಳು ಮತ್ತು ಸಮುದಾಯ ನಿರ್ವಹಣಾ ಚಟುವಟಿಕೆಗಳು, ಸ್ವಚ್ಚತೆ, ಪೌಷ್ಠಿಕತೆ ಮತ್ತು ಸುರಕ್ಷತೆ ಕುರಿತು ವಿವಿಧ ಇಲಾಖಾ ಅಧಿಕಾರಿಗಳಿಗಾಗಿ ಏರ್ಪಡಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಅನುಷ್ಠಾನಗೊಳಿಸುವ ಹಲವು ಯೋಜನೆಗಳು ಪೂರ್ಣ ಪ್ರಮಾಣದಲ್ಲಿ ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಸಂಬಂಧಿತ ಇಲಾಖಾಧಿಕಾರಿಗಳ ನಡುವೆ ಸಮನ್ವಯತೆ ಇರಬೇಕಾದುದು ಅತ್ಯಗತ್ಯ. ಯೋಜನೆಗಳ ವ್ಯವಸ್ಥಿತ ಅನುಷ್ಠಾನದಲ್ಲಿ ಪ್ರತಿ ಇಲಾಖೆಗಳ ನಡುವೆ ಒಂದಿಲ್ಲೊಂದು ಕಾರಣಕ್ಕಾಗಿ ಸಂಬಂಧಗಳಿರುತ್ತವೆ. ಇಲಾಖಾ ಯೋಜನೆಗಳು ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಳ್ಳುವಲ್ಲಿ ನಿರೀಕ್ಷಿತ ಯಶಸ್ಸು ಸಾಧ್ಯವಾಗಿಲ್ಲ. ಅದಕ್ಕೆ ಜನರಲ್ಲಿ ಅರಿವಿನ ಕೊರತೆಯೂ ಕಾರಣವಾಗಿದೆ. ಆದ್ದರಿಂದ ಇಲಾಖಾ ಅಧಿಕಾರಿಗಳು ಈ ವಿಷಯದ ಕುರಿತು ವಿಶೇಷ ಗಮನಹರಿಸಬೇಕಾದ ಅಗತ್ಯವಿದೆ.

ದಶಕಗಳ ಹಿಂದೆ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂಧಿಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮನೆಮನೆ ಭೇಟಿ ನೀಡಿ ಮಾಹಿತಿ ನೀಡುತ್ತಿದ್ದರು. ಅಪೌಷ್ಠಿಕತೆ ನಿವಾರಣೆ ಜಿಲ್ಲೆಯಲ್ಲಿ ಸವಾಲಿನ ಕೆಲಸವೆನಿಸಿದೆ. ಸುಮಾರು ಮೂರು ಸಾವಿರಕ್ಕೂ ಅಧಿಕ ಅಪೌಷ್ಠಿಕ ಮಕ್ಕಳ ಸುರಕ್ಷತೆಗೆ ಗಮನಹರಿಸಲಾಗಿದೆ. ಇವೆಲ್ಲವುಗಳ ಪರಿಹಾರದ ಮೊದಲ ಮಂತ್ರ ವೈಯಕ್ತಿಕ ಶುಚಿತ್ವ ಮತ್ತು ಸುರಕ್ಷತೆಗೆ ಗಮನಹರಿಸಬೇಕು ಎಂದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಯುನಿಸೆಫ್ ರಾಜ್ಯ ಸಂಯೋಜಕ ಮನೋಜ್ ಸೆಬಾಸ್ಟಿಯನ್  ಪ್ರಾಸ್ತಾವಿಕವಾಗಿ ಮಾತನಾಡಿ, ವಿವಿಧ ಇಲಾಖೆಗಳಲ್ಲಿ ಪರಿಣಿತಿ ಪಡೆದ, ನುರಿತ ಅನುಭವ ಹೊಂದಿದ ಅಧಿಕಾರಿ-ಸಿಬ್ಬಂಧಿಗಳಲ್ಲಿರುವ ಕೌಶಲ್ಯಗಳನ್ನು ಬಳಸಿಕೊಂಡು, ಅವರ ನಡುವೆ ಸಮನ್ವಯತೆಯ ಸೇತುವೆ ಕಲ್ಪಿಸಿದಲ್ಲಿ ಆಡಳಿತ ಹಾಗೂ ಅನುಷ್ಠಾನದಲ್ಲಿ ಯಶಸ್ಸು ದೊರೆಯಲಿದೆ ಎಂದರು.

ಕಾರ್ಯಾಗಾರದಲ್ಲಿ ಜಿಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ್, ಜಯಲಕ್ಷ್ಮಮ್ಮ, ನಗರ ಯೋಜನಾಧಿಕಾರಿ ಮೂಕಪ್ಪ ಕರಭೀಮಣ್ಣನವರ್, ವಿಭಾಗೀಯ ಸಂಯೋಜಕ ಡಾ|| ರವೀಶ್ ಬಿ.ಗಣಿ, ಯೊಜನೆಯ ಜಿಲ್ಲಾ ಸಂಚಾಲಕಿ ಸೌಮಿನಿ  ಉಪಸ್ಥಿತರಿದ್ದರು.