ಪೋಕ್ಸೊ ಅಡಿ ಎರಡು ಬಾರಿ ಅಮಾನತಾದ ಶಿಕ್ಷಕನನ್ನು ಬಾಲಕಿಯರ ಪ್ರೌಢಶಾಲೆಗೆ ನೇಮಿಸಿ ಎಂದ ಶಾಸಕ!

ಪೋಕ್ಸೊ ಅಡಿ ಎರಡು ಬಾರಿ ಅಮಾನತಾದ ಶಿಕ್ಷಕನನ್ನು  ಬಾಲಕಿಯರ ಪ್ರೌಢಶಾಲೆಗೆ ನೇಮಿಸಿ ಎಂದ ಶಾಸಕ!

ಶಿವಮೊಗ್ಗ: ಪೊಕ್ಸೋ ಕಾಯ್ದೆಯಡಿ ಎರಡು ಬಾರಿ ಅಮಾನತಾದ ಹೈಸ್ಕೂಲ್ ಶಿಕ್ಷಕನನ್ನು ಶಿವಮೊಗ್ಗ ನಗರ ಶಾಸಕರ ಶಿಫಾರಸಿನ ಮೇರೆಗೆ ನಗರದ ಬಿ ಎಚ್ ರಸ್ತೆಯ ಹೆಣ್ಣುಮಕ್ಕಳ ಪ್ರೌಢಶಾಲೆಗೆ ನಿಯೋಜಿಸಲಾಗಿದ್ದು, ಇದನ್ನು ಪ್ರತಿಭಟಿಸಿ ಶಾಲೆಯ ಎಸ್ ಡಿಎಂಸಿಯವರು ಮತ್ತು ಪೋಷಕರು ಪ್ರತಿಭಟನೆ ನಡೆಸಿ ಶಾಸಕರಿಗೆ ಬುಧವಾರ ಮನವಿ ಸಲ್ಲಿಸಿದ್ದಾರೆ.

  ಭದ್ರಾವತಿ ತಾಲೂಕು ಅರಹತೊಳಲು ಹೈಸ್ಕೂಲಿನಲ್ಲಿ ಸಹ ಶಿಕ್ಷನಾಗಿದ್ದ ಕೆ. ಪಿ. ಪ್ರಕಾಶ್ ಅವರ ಮೇಲೆ ಆರೋಪ ಬಂದ ಹಿನ್ನೆಲೆಯಲ್ಲಿ  ಆ. 12 ರಂದು ಅಂತರಗಂಗೆಯ ಕರ್ನಾಟಕ ಪಬ್ಲಿಕ್ ಶಾಲೆಗೆ ವರ್ಗಾಯಿಸಲಾಗಿತ್ತು.  ಆದರೆ ಶಾಲಾ ಆಡಳಿತ ಮಂಡಳಿ ಅವರನ್ನು ಸೇರಿಸಿಕೊಳ್ಳಲಿಲ್ಲ.

  ಆ. 23 ರಂದು ಮತ್ತೆ ಮಾರ್ಪಾಡು ಮಾಡಿ ಸಾಗರ ತಾಲೂಕು  ಆವಿನಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ವರ್ಗಾಯಿಸಲಾಗಿತ್ತು.

ಇಲ್ಲಿಯೂ  ಅವರನ್ನು ಎಸ್ ಡಿಎಂಸಿ  ಸೇರ್ಪಡೆ ಮಾಡಿಕೊಳ್ಳಲಿಲ್ಲ. ಸೆ. ೧೮ರಂದು ಮತ್ತೆ ಭದ್ರಾವತಿ ತಾಲೂಕು ಬಾಳೆಮಾರನಹಳ್ಳಿ ಸರ್ಕಾರಿ ಪ್ರೌಢಶಾಲೆಗೆ  ವರ್ಗಾಯಿಸಲಾಗಿದೆ.

ಇಲ್ಲಿಯೂ ಅವರನ್ನು ಸ್ಥಳೀಯ ಆಡಳಿತ ಹಾಜರ್ಪಡಿಸಿಕೊಳ್ಳಲಿಲ್ಲ್ಲ. 

ನ.15 ರಂದು  ಶಿವಮೊಗ್ಗ ನಗರ ಶಾಸಕರ ಶಿಫಾರಸಿನಂತೆ  ಇಲಾಖಾ ವಿಚಾರಣೆ ಕಾಯ್ದಿರಿಸಿ ಶಿವಮೊಗ್ಗದ ಕರ್ನಾಟಕ ಸಂಘದ ಪಕ್ಕದಲ್ಲಿರುವ ಬಾಲಕಿಯರ ಪ್ರೌಢಶಾಲಾ ವಿಭಾಗಕ್ಕೆ ವರ್ಗಾಯಿಸಲಾಗಿದೆ. 

ಈ ಶಿಕ್ಷಕ  ಎರಡು ಬಾರಿ ಇಲಾಖೆಯಿಂದ ಪೊಕ್ಸೊ ಹಿನ್ನೆಲೆಯಲ್ಲಿ  ಅಮಾನತಾಗಿದ್ದ. ಆದರೆ ಮತ್ತೆ ಈಗ ಬಾಲಕಿಯರ ಪ್ರೌಢಶಾಲೆಗೆ ನೇಮಿಸಿರುವುದು ನೋವಿನ ಸಂಗತಿ ಎಂದು ಎಸ್‌ಡಿಎಂಸಿ ಮತ್ತು ಪೋಷಕರು ಹೇಳಿದ್ದಾರೆ. 

ಜಿಲ್ಲಾ ಕೇಂದ್ರದಲ್ಲಿರುವ ಏಕೈಕ ಹೆಣ್ಣುಮಕ್ಕಳ ಶಾಲೆ ಇದಾಗಿದೆ. ವಿದ್ಯಾರ್ಥಿನಿಯರ ಹಿತದೃಷ್ಟಿಯಿಂದ ಇಲ್ಲಿ ಅವರು ಕರ್ತವ್ಯ ನಿರ್ವಹಿಸಲು ಅವಕಾಶ ಕೊಡಬಾರದು. ಒಂದು ವೇಳೆ ಬೇರೆಡೆ ವರ್ಗಾಯಿಸದಿದ್ದರೆ  ಎಲ್ಲ ಪೋಷಕರು, ಎಸ್‌ಡಿಎಂಸಿಯವರು ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ.

ಆದ್ದರಿಂದ ಕೂಡಲೇ ಇವರನ್ನು ಬೇರೆಡೆ ವರ್ಗಾಯಿಸಲು ಡಿಡಿಪಿಐಗೆ ಆದೇಶಿಸಬೇಕೆಂದು ಮನವಿ ಮಾಡಿದ್ದಾರೆ.

ಎಸ್ ಡಿಎಂಸಿ ಅಧ್ಯಕ್ಷ ನಾಗೇಂದ್ರ, ನೇತೃತ್ವದಲ್ಲಿ ಶಾಲೆ ಎದುರು ಪ್ರತಿಭಟನೆ ನಡೆಸಿ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ.