ಪರಿಷ್ಕೃತ ಜಾಹೀರಾತು ನೀತಿಗೆ ಮನವಿ

ಪರಿಷ್ಕೃತ  ಜಾಹೀರಾತು ನೀತಿಗೆ ಮನವಿ

ಬೆಂಗಳೂರು,ಆ.21 : ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಜಿಲ್ಲಾ, ಪ್ರಾದೇಶಿಕ ಪತ್ರಿಕೆಗಳ ಹಾಗೂ ಪತ್ರಕರ್ತರ ಸಮಸ್ಯೆ ಆಲಿಸಿದರು.

ಮುಖ್ಯಮಂತ್ರಿ ಅಧಿಕೃತ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ವಿವಿಧ ಪತ್ರಿಕಾ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿ ಜಿಲ್ಲಾ ಮಟ್ಟದಲ್ಲಿ ಪ್ರಕಟವಾಗುವ ಜಿಲ್ಲಾ ಹಾಗೂ ಪ್ರಾದೇಶಿಕ ಪತ್ರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳ ಮನವರಿಕೆ ಮಾಡಿಕೊಟ್ಟರು.

ಪತ್ರಕರ್ತರಿಗೆ ಗ್ರಾಮೀಣ ಬಸ್‌ಪಾಸ್, ಉಚಿತ ಆರೋಗ್ಯ ಕಾರ್ಡ್, ನಿವೃತ್ತಿ ಹೊಂದಿದ ಪತ್ರಕರ್ತರಿಗೆ ನೀಡುವ ಮಾಸಾಶನ ನಿಯಮಗಳನ್ನು ಸರಳೀಕರಣಗೊಳಿಸುವುದು ಹಾಗೂ ಪತ್ರಕರ್ತರ ಕಲ್ಯಾಣ ನಿಧಿ ಬಿಡುಗಡೆಗೆ ಇರುವ ಕಠಿಣ ನಿಯಮಗಳ ಬದಲಾವಣೆ ಮಾಡುವುದು ಹಾಗೂ ಪತ್ರಿಕಾ ವಿತರಕರಿಗೆ ಅಸಂಘಟಿತ ಕಾರ್ಮಿಕರಿಗೆ ನೀಡುವ  ಸೌಲಭ್ಯಗಳು ನೀಡಲು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಡಗೂರು ಕೋರಿದರು.

ವರ್ಣ ಮುದ್ರಣ (ಕಲರ್ ಪ್ರಿಂಟಿಂಗ್) ಪ್ರಕಟವಾಗುವ ಪ್ರಾದೇಶಿಕ ಪತ್ರಿಕೆಗಳು ರಾಜ್ಯಮಟ್ಟದ ಪತ್ರಿಕೆಗಳಿಗೆ ಸರಿಸಮನಾಗಿ ಮೂಲಭೂತ ಸೌಕರ್ಯಗಳು, ಸಿಬ್ಬಂದಿ, ಮುದ್ರಣ ಯಂತ್ರ ಹೊಂದಿ ವಿವಿಧ ಆವೃತ್ತಿಗಳನ್ನು ಪ್ರಾರಂಭಿಸುವ ಮೂಲಕ 15-20 ಜಿಲ್ಲೆಗಳಲ್ಲಿ ಪ್ರಸಾರ ಹೊಂದಿದ್ದರೂ ಅವುಗಳಿಗೆ ನಿಯಮಿತವಾಗಿ ರಾಜ್ಯಮಟ್ಟದ ಪತ್ರಿಕೆಗಳಿಗೆ ಸಿಗುವ ಜಾಹೀರಾತು ಸಿಗುತ್ತಿಲ್ಲ. ಇಂತಹ ಪ್ರಾದೇಶಿಕ ಪತ್ರಿಕೆಗಳಿಗೆ ನಿಯಮಿತ ಜಾಹೀರಾತು ನೀಡುವಂತೆ ಪ್ರಾದೇಶಿಕ ಪತ್ರಿಕೆ ಸಂಘದ ರಾಜ್ಯಾಧ್ಯಕ್ಷ ಎನ್. ಮಂಜುನಾಥ ಮತ್ತು ಕಾರ್ಯದರ್ಶಿ ನಾಗರಾಜ್ ಮನವಿ ಮಾಡಿದರು.

ಜಾಹೀರಾತು ನೀತಿ 2018 ರಲ್ಲಿಯೇ ಪೂರ್ಣಗೊಂಡಿದ್ದು, ಅದನ್ನು ಪರಿಷ್ಕರಿಸಿ ಪುನಃ ಜಾರಿಗೆ ತರಬೇಕಾಗಿದೆ. ಆದಕ್ಕಾಗಿ ಪತ್ರಿಕೆ ಮಾಲೀಕರನ್ನು ಆಹ್ವಾನಿಸಿ ಅವರ ಸಲಹೆ ಸೂಚನೆ ಮೇರೆಗೆ ನೂತನ ಜಾಹೀರಾತು ನೀತಿ ಜಾರಿಗೆ ತಂದು ಪ್ರಾದೇಶಿಕ, ಜಿಲ್ಲಾ ಮಟ್ಟದಲ್ಲಿ ನಿಯಮಿತವಾಗಿ ಮುದ್ರಣವಾಗುವ ಪತ್ರಿಕೆಗಳಿಗೆ ಅನುಕೂಲವಾಗುವಂತೆ ನೀತಿ ರೂಪಿಸುವಂತೆ ನಾಗರಾಜ್ ಕೋರಿದರು.

ಜಿಲ್ಲಾ ಮಟ್ಟದಲ್ಲಿ ಪ್ರಕಟವಾಗುವ ಪತ್ರಿಕೆಗಳಿಗೆ ಸಹ ಜಾಹೀರಾತು ಬಿಡುಗಡೆ ಮಾಡಬೇಕು ಮತ್ತು ಮಾಧ್ಯಮ ಪಟ್ಟಿಯಲ್ಲಿ ಸೇರ್ಪಡೆಯಾಗಿ ಕೇವಲ ವೋಚರ್ ಕಾಪಿಗಳು ಮುದ್ರಣ ಮಾಡುತ್ತಿರುವ ಪತ್ರಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಘದ ಕೆಂಚೇಗೌಡ ಕೋರಿ, ಜಾಹೀರಾತು ನೀತಿ ಜಾರಿ ಮಾಡಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಕನಿಷ್ಠ 30 ಪ್ರಾದೇಶಿಕ ಪತ್ರಿಕೆಗಳು ವರ್ಣ ಮುದ್ರಣದಲ್ಲಿ ಪ್ರಕಟವಾಗಿ ರಾಜ್ಯ ಮಟ್ಟದ ಪತ್ರಿಕೆಗೆ ಸಮನಾಗಿ ಪ್ರಸಾರ ಹೊಂದಿಲ್ಲದೆ, ಸಿಬ್ಬಂದಿ ಮತ್ತು ಯಂತ್ರೋಪಕರಣಗಳನ್ನು ಅಳವಡಿಸಿಕೊಂಡಿವೆ. ಅಂತಹ ಪತ್ರಿಕೆಗಳಿಗೆ ರಾಜ್ಯ ಮಟ್ಟದ ಪತ್ರಿಕೆಗಳಿಗೆ ನೀಡುವ ಎಲ್ಲಾ ಜಾಹೀರಾತುಗಳನ್ನು ನೀಡಬೇಕು ಎಂದು ಸುದ್ದಿಮೂಲ ಪತ್ರಿಕೆ ಪ್ರಧಾನ ವರದಿಗಾರ ಬಿ. ವೆಂಕಟ್‌ಸಿಂಗ್ ಮನವಿ ಮಾಡಿದರು.

ಸಭೆಯಲ್ಲಿ ಉಪಸ್ಥಿತರಿದ್ದ ವಾರ್ತಾ ಇಲಾಖೆ ಆಯುಕ್ತ ಹೇಮಂತ್ ನಿಂಬಾಳ್ಕರ್, ಗ್ರಾಮೀಣ ಪತ್ರಕರ್ತರ ಬಸ್‌ಪಾಸ್ ಮತ್ತು ಆರೋಗ್ಯ ಕಾರ್ಡ್ ವಿತರಣೆಗೆ ಸಂಬಂಧಿಸದಿಂತೆ ಈಗಾಗಲೇ ಇಲಾಖೆ ವತಿಯಿಂದ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಹೇಳಿದರು.

ಸಭೆಯಲ್ಲಿ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ವಾರ್ತಾ ಇಲಾಖೆ ಮತ್ತು ಮುಖ್ಯಮಂತ್ರಿ ಕಾರ್ಯದರ್ಶಿ ಎನ್. ಜಯರಾಮ್  ಹಾಜರಿದ್ದರು.

ಬೇಡಿಕೆಗಳ ಸಮಗ್ರ ಪರಿಶೀಲನೆ:

ವಿವಿಧ ಸಂಘಟನೆಗಳ ಅಹವಾಲು ಆಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಎಲ್ಲರ ಬೇಡಿಕೆಗಳನ್ನೂ ಸಮಗ್ರವಾಗಿ ಪರಿಶೀಲಿಸಿ ಬಳಿಕ ಪ್ರತಿಕ್ರಿಯಿಸುವುದಾಗಿ ತಿಳಿಸಿದರು.