ಪತ್ನಿ ಕೊಲೆ‌ ಮಾಡಲು ಮೊದಲೇ ಸಂಚು ರೂಪಿಸಿದ್ದ: ಪತ್ನಿ ಶವ ಹೂತಿಟ್ಟ ಪಾಪಿ ಪತಿ ಸೆರೆ...!

ಪತ್ನಿ ಕೊಲೆ‌ ಮಾಡಲು ಮೊದಲೇ ಸಂಚು ರೂಪಿಸಿದ್ದ: ಪತ್ನಿ ಶವ ಹೂತಿಟ್ಟ ಪಾಪಿ ಪತಿ ಸೆರೆ...!
ದಾವಣಗೆರೆ: ಆರು ತಿಂಗಳ ಗರ್ಭಿಣಿಯನ್ನು‌ ಕೊಂದು ಹೂತು ಹಾಕಿದ್ದ ಪತಿಯನ್ನು ಚನ್ನಗಿರಿ ಪೊಲೀಸರು ಬಂಧಿಸಿದ್ದು, ಮೃತಳ ಅತ್ತೆ, ಮಾವ ಪತ್ತೆಗೆ ಬಲೆಬೀಸಿದ್ದಾರೆ. 
ಚನ್ನಗಿರಿ ತಾಲೂಕಿನ ಉಬ್ರಾಣಿ ಹೋಬಳಿಯ ಗಂಗಗೊಂಡನಹಳ್ಳಿ ಗ್ರಾಮದಲ್ಲಿ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ‌. ಮೋಹನ್ ಕುಮಾರ್ (25) ಬಂಧಿತ ಆರೋಪಿ. 
ಘಟನೆ ಹಿನ್ನೆಲೆ: 
ದಾವಣಗೆರೆ ತಾಲೂಕಿನ ಐಗೂರು ಗ್ರಾಮದ ಲೋಕೇಶಪ್ಪ ಎಂಬುವವರ ಪುತ್ರಿ ಚಂದ್ರಕಲಾ ಅಲಿಯಾಸ್ ರಶ್ಮಿ (21) ಹತ್ಯೆಗೀಡಾದಾಕೆ. ಈಕೆಯನ್ನು ಗಂಗಗೊಂಡನಹಳ್ಳಿಯ ಮೋಹನ್ ಕುಮಾರ್ ಜೊತೆ ಕಳದ ಏಳು ತಿಂಗಳ ಹಿಂದೆಯಷ್ಟೇ ವಿವಾಹವಾಗಿತ್ತು. ಮದುವೆಯಾದ ಕೆಲ ದಿನಗಳಲ್ಲಿಯೇ ದಾಂಪತ್ಯದಲ್ಲಿ ಬಿರುಕು‌ ಮೂಡಿತ್ತು. ಚಂದ್ರಕಲಾ‌ ಶೀಲ ಶಂಕಿಸಿ‌ ಮೋಹನ್ ಕುಮಾರ್ ಚಿತ್ರಹಿಂಸೆ ನೀಡುತ್ತಿದ್ದ.
ಜೊತೆಗೆ ವರದಕ್ಷಿಣೆ ತರುವಂತೆ ಕಿರುಕುಳ ನೀಡಲಾರಂಭಿಸಿದ್ದ. 
ಮೋಹನ್ ಕುಮಾರ್ ಗೆ ಚಂದ್ರಕಲಾ ಅಲಿಯಾಸ್ ರಶ್ಮಿ ಫೋನ್ ನಲ್ಲಿ ಮಾತನಾಡುವುದು ಆಗುತ್ತಿರಲಿಲ್ಲ.
ಯಾರ ಜೊತೆ ಮಾತನಾಡುತ್ತೀಯಾ, ಯಾರ್ಯಾರ ಜೊತೆ ನಿನಗೆ ಸಂಬಂಧ ಇದೆ ಎಂದು ಪ್ರಶ್ನಿಸುತ್ತಿದ್ದ. ತವರು ಮನೆಯವರಿಗೂ ಕದ್ದು ಮುಚ್ಚಿ ಚಂದ್ರಕಲಾ ಫೋನ್‌ ಮಾಡಬೇಕಿತ್ತು. ಅಷ್ಟರ ಮಟ್ಟಿಗೆ ಕಿರುಕುಳ ನೀಡುತ್ತಿದ್ದ. 
ಈ ವಿಚಾರ ಚಂದ್ರಕಲಾ ಕುಟುಂಬದವರಿಗೂ ಗೊತ್ತಿತ್ತು. ಮದುವೆಯಾದ ಆರಂಭದಲ್ಲಿ ಹೊಂದಾಣಿಕೆ ಬೇಗ ಆಗೋಲ್ಲ ಎಂಬ ಕಾರಣಕ್ಕೆ ಚಂದ್ರಕಲಾಳಿಗೆ ಬುದ್ದಿವಾದ ಹೇಳಿ ಗಂಡನ ಮನೆಗೆ ಕಳುಹಿಸಿದ್ದರು. 
ಒಂದೂವರೆ ತಿಂಗಳ ಹಿಂದೆ ಗಂಡ ಹೆಂಡತಿಯ ನಡುವಿನ ಜಗಳ ತಾರಕಕ್ಕೇರಿದೆ. ಆಗ ಪತ್ನಿಯ ಕತ್ತು ಹಿಸುಕಿ ಕೊಲೆ‌‌ ಮಾಡಿದ ಮೋಹನ್ ಕುಮಾರ್, ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಹುಣಘಟ್ಟ ಕಾಡಿನಲ್ಲಿ ಗುಂಡಿ ತೆಗೆದು ಶವ ಹೂತಿಟ್ಟಿದ್ದ. ಬಳಿಕ ಚಂದ್ರಕಲಾ ಪೋಷಕರಿಗೆ ನಿಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ಹೇಳಿ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. 
ಚಂದ್ರಕಲಾ ಪೋಷಕರಿಗೆ ಮೋಹನ್ ಕುಮಾರ್ ಮೇಲೆ ಅನುಮಾನ ಇತ್ತು. ಸಂಬಂಧಿಕರು ಹಾಗೂ ಕುಟುಂಬದವರಿಗೆ ಕರೆ ಮಾಡಿದ್ದ ಚಂದ್ರಕಲಾ ಮಾತುಗಳನ್ನು ಸೂಕ್ಷ್ಮವಾಗಿ ಆಲಿಸಿದ್ದಾರೆ. ತನ್ನ ನೋವುಗಳನ್ನು ಸಹ ಹೇಳಿಕೊಂಡಿದ್ದಳು.
ಗಂಡ, ಅತ್ತೆ, ಮಾವ ಚಿಕ್ಕಪುಟ್ಟ ವಿಷಯಕ್ಕೂ ತೊಂದರೆ ಕೊಡುವ ಕುರಿತಂತೆ ಮಾತನಾಡಿದ್ದು ಗೊತ್ತಾಗಿದೆ. ಆಗ ಮೋಹನ್ ವಿರುದ್ಧ ದೂರು ದಾಖಲಿಸಿದ್ದರು‌. 
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 
ತಿಂಗಳ ಹಿಂದೆ ಸಂಚು ರೂಪಿಸಿದ್ದ: 
ಗಂಡ ಹೆಂಡತಿಯ ಜಗಳ ನಡೆಯುತಿತ್ತು. ಈ ಹಿನ್ನೆಲೆಯಲ್ಲಿ ಮೋಹನ್ ಕುಮಾರ್ ತಿಂಗಳ ಹಿಂದೆಯೇ ಸಂಚು ರೂಪಿಸಿದ್ದ. ಅಜ್ಜಂಪುರ ತಾಲೂಕಿನ ಶಿರಲಿಗಪುರ ಕಣಿವೆ ಬಳಿ ಗುಂಡಿ ತೋಡಿ ಗುರುತು ಮಾಡಿ ಹೋಗಿದ್ದ ಎಂದು ತಿಳಿದು ಬಂದಿದೆ. 
ಅ.8ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಚಂದ್ರಕಲಾ ಅವರನ್ನು ಕೊಲೆ ಮಾಡಿ ಮಧ್ಯರಾತ್ರಿ ಕಾರಿನಲ್ಲಿ ಮೃತದೇಹ ತೆಗೆದುಕೊಂಡು ಹೋಗಿ ತಾನು ತೆಗೆದಿದ್ದ ಗುಂಡಿಯಲ್ಲಿ ಹೂತಿಟ್ಟು ಬಂದಿದ್ದ ಪೊಲೀಸರು ತಿಳಿಸಿದ್ದಾರೆ.
ಬದುಕಿ ಬಾಳಬೇಕಿದ್ದ ಚಂದ್ರಕಲಾ ಅಲಿಯಾಸ್ ರಶ್ಮಿ ಬದುಕು ದುರಂತದಲ್ಲಿ ಅಂತ್ಯ ಕಂಡಿದೆ. ಪಾಪಿ ಪತಿ ಮೋಹನ್ ಕುಮಾರ್ ಬಂಧಿಸಿದ್ದು, ಅತ್ತೆ, ಮಾವ ಪತ್ತೆಗೆ ಬಲೆ ಬೀಸಿದ್ದಾರೆ.