ನ್ಯಾಯಾಲಯದ ಹಳೆಯ ಕಟ್ಟಡವನ್ನು ಗೋಡೌನ್ ಮಾಡಿಕೊಂಡ ಭೂಪ

ನ್ಯಾಯಾಲಯದ ಹಳೆಯ ಕಟ್ಟಡವನ್ನು ಗೋಡೌನ್ ಮಾಡಿಕೊಂಡ ಭೂಪ

ತೀರ್ಥಹಳ್ಳಿ:ಇಲ್ಲಿನ ನ್ಯಾಯಾಲಯದ ಹಳೆಯ ಕಟ್ಟಡದ ಹಿಂಭಾಗದ ಕೋಣೆಗಳ ಬಾಗಿಲು ಮುರಿದು ಗುಜರಿ ಸಾಮಾನುಗಳು ಮತ್ತು ರಟ್ಟಿನ ಬಾಕ್ಸುಗಳನ್ನು ಅಕ್ರಮವಾಗಿ ದಾಸ್ತಾನು ಹಾಕಿರುವುದನ್ನು, ಆವರಣದಲ್ಲಿ ಎರಡು ವಾಹನಗಳನ್ನು ನಿಲ್ಲಿಸಿರುವುದನ್ನು ಪೊಲೀಸರು ಪತ್ತೆ ಮಾಡಿ ಓರ್ವನ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

 ಈ ವಸ್ತುಗಳು ಮೇಹ್ರಾರಾಮ್ ಎನ್ನುವವರಿಗೆ ಸಂಬಂಧಪಟಟಿದೆಂದು ಗೊತ್ತಾಗಿದೆ.ತೀರ್ಥಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಸೊಪ್ಪುಗುಡ್ಡೆ ಎರಡನೇ ಕ್ರಾಸ್ ನಿವಾಸಿ ಮೇಹ್ರಾರಾಮ್ ಬಿನ್ ಮಕಾನಾರಾಮ್ (48) ನ್ಯಾಯಾಲಯ ಕಟ್ಟಡದ ಒಳಗೆ ಅತಿಕ್ರಮ ಪ್ರವೇಶ ಮಾಡಿ ಹಿಂಭಾಗದ ಬಾಗಿಲು ಬೀಗವನ್ನು ಮುರಿದು ಬಾಗಿಲು ಮತ್ತು ಕಿಟಕಿಗಳಿಗೆ ಹಾನಿ ಮಾಡಿ ತಾನು ವ್ಯಾಪಾರ ಮಾಡುತ್ತಿರುವ ಗುಜರಿ ಸಾಮಾನುಗಳನ್ನು ಮತ್ತು ರಟ್ಟಿನ ಬಾಕ್ಸ್  ಗಳನ್ನು ನ್ಯಾಯಾಲಯದ ಕಟ್ಟಡದ ಒಳಗೆ ದಾಸ್ತಾನು ಮಾಡಿದ್ದನು.  

 ಸೀಬಿನಕೆರೆಯಲ್ಲಿ ಹೊಸ ನ್ಯಾಯಾಲಯದ ಕಟ್ಟಡ ಪ್ರಾರಂಭವಾದ ನಂತರ ಸೊಪ್ಪು ಗುಡ್ಡೆಯಲ್ಲಿ ಹಳೆ ಕಟ್ಟಡವನ್ನು ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹಾಕಿ ನ್ಯಾಯಾಲಯದ ಕೊಠಡಿಗಳಿಗೆ ಬೀಗ ಹಾಕಲಾಗಿತ್ತು.

  ದುಷ್ಕರ್ಮಿಗಳು ರಾತ್ರಿ ಹೊತ್ತು ನ್ಯಾಯಾಲಯದ ಹಿಂಭಾಗದಲ್ಲಿ ಕುಳಿತು ಮದ್ಯ ಸೇವನೆ ಮಾಡುವುದು ಧೂಮಪಾನ ಮಾಡುವುದು ಇನ್ನಿತರೆ ಕೆಲಸಗಳಲ್ಲಿ ನ್ಯಾಯಾಲಯದ ಆಭರಣದ ಸ್ವಚ್ಛತೆಯನ್ನು ಹಾಳು ಮಾಡುತ್ತಿದ್ದರು. ಅನೇಕರು ತಮ್ಮ ಕಾರುಗಳನ್ನು ನ್ಯಾಯಾಲಯದ ಆವರಣದ ಒಳಗೆ ನಿಲ್ಲಿಸಿ ಪಾರ್ಕಿಂಗ್ ವ್ಯವಸ್ಥೆಗೆ ಮಾಡಿಕೊಂಡಿದ್ದರು. ಈ ಬಗ್ಗೆ ಹಿರಿಯ ಸಿವಿಲ್ ನ್ಯಾಯಾಧೀಶರು ಮನಗಂಡು ಲೋಕೋಪಯೋಗಿ ಇಲಾಖೆಯ ಮೂಲಕ ಸ್ವಚ್ಛ ಗೊಳಿಸಲು ಮತ್ತು ನ್ಯಾಯಾಲಯ ಆವರಣದಲ್ಲಿ ಸಾರ್ವಜನಿಕರು ಯಾರು ಪ್ರವೇಶ ಮಾಡದಂತೆ ಹಾಗೂ ಕಾರುಗಳನ್ನು ವಾಹನಗಳನ್ನು ಪಾರ್ಕಿಂಗ್ ಮಾಡದಂತೆ ಕ್ರಮ ಜರುಗಿಸಲು ಸೂಚಿಸಿದ್ದರು. 

ಸ್ಥಳಕ್ಕೆ  ತೀರ್ಥಹಳ್ಳಿ ಹಿರಿಯ ವ್ಯವಹಾರಗಳ ಸಿವಿಲ್ ನ್ಯಾಯಾಲಯ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯ ದ ಆಡಳಿತ ಶಿರಸ್ತೇದಾರ್ ಲೀನಾ ಕೆ. ಎಸ್. ಅವರು  ಹೋದಾಗ ಈ ಸಂಗತಿ ಬೆಳಕಿಗೆ ಬಂದು ದೂರು ದಾಖಲಿಸಿಸಿದ್ದಾರೆ.