ಧನಾತ್ಮಕ ಮನೋಭಾವ ಬೆಳೆಸಿಕೊಳ್ಳಿ: ಜಿಪಂ‌ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ

ಧನಾತ್ಮಕ ಮನೋಭಾವ ಬೆಳೆಸಿಕೊಳ್ಳಿ: ಜಿಪಂ‌ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ
ಶಿವಮೊಗ್ಗ ಸೆಪ್ಟೆಂಬರ್ 19 :ಯಾವುದೇ ಕ್ರೀಡಾಪಟು ಧನಾತ್ಮಕ ಮನೋಭಾವ ಹೊಂದುವುದು ಅತಿ ಮುಖ್ಯ ಎಂದು ಜಿಲ್ಲಾ ಪಂಚಾಯತ್ ಆಡಳಿತ ವಿಭಾಗದ ಉಪ  ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಹೇಳಿದರು..
       ಸೋಮವಾರ  ನಗರದ  ನೆಹರು ಕ್ರೀಡಾಂಗಣದಲ್ಲಿ ಉದ್ಘಾಟನೆಗೊಂಡ ಎರಡು ದಿನಗಳ ಕಾಲ‌ನಡೆಯುವ ಬೆಂಗಳೂರು ಗ್ರಾಮಾಂತರ ವಿಭಾಗ ಮಟ್ಟದ ದಸರಾ ಕ್ರೀಡಾಕೂಟವನ್ನು ಬಲೂನ್‍ಗಳನ್ನು ಹಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
       ಧನಾತ್ಮಕ ಮನೋಭಾವ ಮತ್ತು ಆತ್ಮವಿಶ್ವಾಸ ಯಾವುದೇ ಕ್ರೀಡೆಗಳನ್ನು ಗೆಲ್ಲಲು ಸಹಕರಿಸುತ್ತವೆ. ಈ ನಿಟ್ಟಿನಲ್ಲಿ ಎಲ್ಲ ಕ್ರೀಡಾಪಟುಗಳು ತಮ್ಮ ಗುರಿಯತ್ತ ಗಮನ ಹರಿಸಿ ಮುನ್ನಡೆಯಬೇಕೆಂದರು.
       
       ಆತ್ಮ ವಿಶ್ವಾಸ ಮತ್ತು  ಗುರಿ ಇದ್ದರೆ ಸಾಧನೆಯೆಡೆ ಗಮನ ಹರಿಸಿ ಗೆಲುವು ತಮ್ಮದಾಗಿಸಿಕೊಳ್ಳಬಹುದು ಎಂದ ಅವರು, ನೋಬಲ್ ಪಾರಿತೋಷಕ ಪ್ರಶಸ್ತಿ ಪುರಸ್ಕೃತ ಥಾಮಸ್ ಆಲ್ವಾ ಎಡಿಸನ್ ಅವರ ತಾಯಿ ಹೇಗೆ ತನ್ನ ಮಗನಲ್ಲಿ ಧನಾತ್ಮಕ ಮನೋಭಾವ ಮೂಡಿಸಿ, ಜೀವನದಲ್ಲಿ ಮುನ್ನಡೆಯುವಂತೆ ಮಾಡಿದಳು ಎಂಬ ಉದಾಹರಣೆಯೊಂದಿಗೆ ಕ್ರೀಡಾಪಟುಗಳನ್ನು ಹುರಿದುಂಬಿಸಿದರು.
     ವಾಲಿಬಾಲ್ ಅಸೋಸಿಯೇಷನ್‍ನ ಕಾರ್ಯಾಧ್ಯಕ್ಷ ಕಾಂತೇಶ್.ಕೆ.ಇ ಮಾತನಾಡಿ, ಕ್ರೀಡೆಯನ್ನು ಕೇವಲ ಆಟವೆಂದುಕೊಳ್ಳದೆ, ಸವಾಲೆಂದು ಸ್ವೀಕರಿಸಿ ಕ್ರೀಡಾ ಮನೋಭಾವದಿಂದ ಆಟವಾಡಬೇಕು. ಜೀವನದಲ್ಲಿ  ಒಳ್ಳೆಯ ಮತ್ತು ಕೆಟ್ಟ ಪರಿಸ್ಥತಿಗಳು ಎದುರಾಗುತ್ತವೆ. ಒಳ್ಳೆಯದನ್ನು ಸ್ವೀಕರಿಸಿ, ಹೆತ್ತ ತಂದೆ-ತಾಯಿಗಳೊಟ್ಟಿಗಿದ್ದು ದೇಶಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದರು. 
     ಶಿವಮೊಗ್ಗ, ದಾವಣಗೆರೆ, ಚಿಕ್ಕಬಳ್ಳಾಪುರ, ರಾಮನಗರ, ತಮಕೂರು ಸೇರಿಂತೆ 8 ಜಿಲ್ಲೆಗಳ ಕ್ರೀಡಾಪಟುಗಳಿಗೆ ಅಥ್ಲೆಟಿಕ್ಸ್, ವಾಲಿಬಾಲ್, ಬ್ಯಾಸ್ಕೆಟ್‍ಬಾಲ್, ಷಟಲ್ ಬ್ಯಾಡ್ಮಿಂಟನ್, ಟೆನ್ನಿಸ್ ಮತ್ತು ಈಜು ಸ್ಪರ್ಧೆಗಳು ನಡೆಯಲಿವೆ.
       ವೇದಿಕೆಯಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ನಿರ್ದೇಶಕ ನಾಗರಾಜ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ, ಒಲಂಪಿಕ್ಸ್ ಅಸೋಸಿಯೇಷನ್‍ನ ಕಾರ್ಯದರ್ಶಿ ಶಶಿ, ನಿವೃತ್ತ ದೈಹಿಕ ಶಿಕ್ಷಕರು ಹಾಗೂ ಅಂತರಾಷ್ಟ್ರೀಯ ಅಥ್ಲೆಟಿಕ್ಸ್ ತೀರ್ಪುಗಾರ ವಿಶ್ವನಾಥ್ ಹಾಜರಿದ್ದರು.