ದೇವರ ಆರಾಧನೆಯಿಂದ ಪುಣ್ಯಪ್ರಾಪ್ತಿ: ಕೈವಲ್ಯ ಶ್ರೀಗಳು

ದೇವರ ಆರಾಧನೆಯಿಂದ ಪುಣ್ಯಪ್ರಾಪ್ತಿ: ಕೈವಲ್ಯ ಶ್ರೀಗಳು

ಶಿವಮೊಗ್ಗ: ದೇವರ ಸೇವೆಯಿಂದ ಆನಂದ ಉಂಟಾಗುತ್ತದೆ. ದೇವರ ಆರಾಧನೆಯಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಪ್ರಾರ್ಥನೆ ಮಾಡುವಾಗ ನನ್ನ ಜೊತೆ ಇತರರಿಗೂ ಒಳ್ಳೆಯದು ಮಾಡು ಎಂದು ಬೇಡಿಕೊಂಡರೆ ನಿಶ್ಚಿತವಾಗಿ ದೇವರ ಅನುಗ್ರಹ ಪ್ರಾಪ್ತವಾಗುತ್ತದೆ ಎಂದು ಸಂಸ್ಥಾನ ಗೌಡ ಪಾದಾಚಾರ್ಯ ಕೈವಲ್ಯ ಮಠಾಧೀಶ ಶಿವಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಅವರು ನಗರದ ಜಿ.ಎಸ್.ಕೆ.ಎಂ. ರಸ್ತೆಯ ಗೌಡ ಸಾರಸ್ವತ ಸಮಾಜದ  ಲಕ್ಷ್ಮಿ ವೆಂಕಟರಮಣ ದೇವಮಂದಿರದಲ್ಲಿ ಆಶೀರ್ವಚನ ನೀಡಿದರು.

ಮನುಷ್ಯನಾಗಿ ಹುಟ್ಟಿದ ಮೇಲೆ ಪಾಪ, ಪುಣ್ಯ ಎರಡೂ ಇರುತ್ತದೆ. ಅವರವರ ಕರ್ಮಾನುಸಾರ ಅವರಿಗೆ ಅದು ಲಭ್ಯವಾಗುತ್ತದೆ. ಸ್ವಾರ್ಥ, ಅಹಂಕಾರ ಬಿಟ್ಟಾಗ ದೇವರ ಅನುಗ್ರಹ ಪ್ರಾಪ್ತವಾಗುತ್ತದೆ. ಪ್ರಾರ್ಥನೆ ಮಾಡುವಾಗ ಶುದ್ಧ ಮನಸ್ಸಿನಿಂದ ಮಾಡಬೇಕು ಎಂದರು.

ನಮ್ಮ ಸಂಸ್ಕಾರ, ಸಂಸ್ಕೃತಿ ಮರೆಯದೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು. ಸೇವೆಯಿಂದ ಸಿಗುವ ಆನಂದ ಯಾವುದರಲ್ಲಿಯೂ ಲಭ್ಯವಿಲ್ಲ. ಸೇವೆ ಮಾಡಿದಾಗ ಮಾತ್ರ ದೇವರ ಕೃಪಾದೃಷ್ಟಿ ನಮ್ಮ ಮೇಲೆ ಬೀಳುತ್ತದೆ. ನಮ್ಮ ಪಾಪ ಕರ್ಮಗಳು ನಾಶವಾಗುತ್ತವೆ ಎಂದರು.

ಇದಕ್ಕೂ ಮುನ್ನ ನಗರದ ಹರಕೆರೆ ಶಿವಾಲಯದ ಬಳಿಯಿಂದ ಸಮಾಜ ಬಾಂಧವರು ಅದ್ಧೂರಿಯಾಗಿ ಗುರುಗಳನ್ನು ಬರಮಾಡಿಕೊಂಡರು. ಸುಮಂಗಲಿಯರು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು. 

ಸಮಾಜದ ಅಧ್ಯಕ್ಷ ಭಾಸ್ಕರ್ ಕಾಮತ್, ಕಾರ್ಯದರ್ಶಿ ಸದಾನಂದ ನಾಯಕ್, ಪ್ರಮುಖರಾದ ದೇವದಾಸ್ ನಾಯಕ್, ಗೋಪಾಲಕೃಷ್ಣ ಪಂಡಿತ್, ಸುಧೀರ್ ನಾಯಕ್, ಪ್ರಕಾಶ್ ನಾಯಕ್, ರಮೇಶ್ ಶೆಣೈ, ಮನೋಹರ್ ಕಾಮತ್ ಹಾಗೂ ಸಮಾಜ ಬಾಂಧವರು ಇದ್ದರು.