ದಾವಣಗೆರೆ: ಡಿವೈಡರ್ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಕೇರಳ ಮೂಲದ ಇಬ್ಬರು ಮೃತಪಟ್ಟ ಘಟನೆ ದಾವಣಗೆರೆ ನಗರದ ರಾಷ್ಟ್ರೀಯ ಹೆದ್ದಾರಿ 48ರ ಎಸ್. ಎಸ್. ಹೈಟೆಕ್ ಆಸ್ಪತ್ರೆ ಬಳಿ ನಡೆದಿದೆ.
ಕೇರಳದ ಪಾಲಕ್ ಕಾಡ್ ಸಿಟಿಯ ಪಟ್ಟಿಕಾರದ ತೆಲುನಾಗು ಗಲ್ಲಿಯ ಋಷಿಕೇಶ್ (24) ಹಾಗೂ ಪುಡುಸೆರಿಯ ಅತುಲ್ (25) ಮೃತಪಟ್ಟ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಕೇರಳದಿಂದ ಗೋವಕ್ಕೆ ಜಾಲಿ ಟ್ರಿಪ್ ಬಂದಿದ್ದ ಇಬ್ಬರು ಹುಬ್ಬಳ್ಳಿಯಿಂದ ದಾವಣಗೆರೆ ಮೂಲಕ ಸಾಗುತ್ತಿದ್ದರು.
ಬೈಕ್ ನಲ್ಲಿದ್ದ ಇಬ್ಬರು ಬೆಳ್ಳಂಬೆಳಿಗ್ಗೆ ಸುಮಾರು 3. 30 ರ ಸುಮಾರಿನಲ್ಲಿ ಹೆದ್ದಾರಿಯಲ್ಲಿ ಹೋಗುವಾಗ ವೇಗವಾಗಿದ್ದ ಕಾರಣ ನಿದ್ರೆ ಮಂಪರಿನಲ್ಲಿ ಬೈಕ್ ಸವಾರ ಡಿವೈಡರ್ ಗುದ್ದಿದೆ. ಆ ಬಳಿಕ ಇಬ್ಬರು ಬ್ರಿಡ್ಜ್ ಕೆಳಗಡೆ ಬಿದ್ದಿದ್ದಾರೆ. ಬೈಕ್ ನುಜ್ಜು ಗುಜ್ಜಾಗಿತ್ತು. ಆ ಬಳಿಕ ಈ ಮಾರ್ಗದಲ್ಲಿ ಹೋಗುತ್ತಿದ್ದ ವಾಹನಗಳು ಬೈಕ್ ಗೆ ತಾಗಿಸಿಕೊಂಡು ಹೋಗಿವೆ. ನಂತರ ಬಂದ ಕಾರು ಬೈಕ್ ಡಿಕ್ಕಿ ಹೊಡೆದು ಜಖಂ ಆಗಿತ್ತು.
ಮೇಲ್ನೋಟಕ್ಕೆ ಅಪಘಾತ ಎಂಬಂತೆ ಕಂಡು ಬಂದಿತ್ತು. ಆದ್ರೆ, ಇಬ್ಬರ ಮೃತದೇಹಗಳು ಕೆಳಗಡೆ ಬಿದ್ದಿದ್ದವು. ಆರಂಭದಲ್ಲಿ ಅಪಘಾತ ಎಂಬಂತೆ ಭಾಸವಾದರೂ ಮೃತದೇಹಗಳು ಯಾಕೆ ಕೆಳಗಡೆ ಬಿದ್ದವು ಎಂಬ
ಪ್ರಶ್ನೆ ಕಾಡಲಾರಂಭಿಸಿತು.
ಸುದ್ದಿ ತಿಳಿಯುತ್ತಿದ್ದಂತೆ ದಾವಣಗೆರೆ ದಕ್ಷಿಣ ಟ್ರಾಫಿಕ್ ಪೊಲೀಸರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬ್ರಿಡ್ಜ್ ಮೇಲಿನಿಂದ ನಿಂತು ವೀಕ್ಷಿಸಿದಾಗ ಕೆಳಗಡೆ ಇಬ್ಬರು ಬಿದ್ದಿದ್ದರು. ಬೈಕ್ ಡಿವೈಡರ್ ಗೆ ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರೂ ಕೆಳಗಡೆ ಬಿದ್ದಿದ್ದರು. ಬೈಕ್ ಗೆ ಡಿಕ್ಕಿ ಹೊಡೆದು ನಿಂತಿದ್ದ ಕಾರು ಚಾಲಕರನ್ನು ವಿಚಾರಿಸಿದರು. ಆಗ ನಾವು ಬರುವುದಕ್ಕಿಂತ ಮುಂಚೆ ಅಪಘಾತವಾಗಿತ್ತು. ನಾವು ಕೆಳಗಡೆ ನೋಡಿದೆವು. ಕತ್ತಲಾಗಿದ್ದ ಕಾರಣ ಏನೂ ಕಾಣಲಿಲ್ಲ. ಸ್ವಲ್ಪ ಬೆಳಕು ಬಂದ ಮೇಲೆ ಕೆಳಗಡೆ ಮೃತದೇಹವೊಂದು ಕಂಡು ಬಂತು ಎಂದು ಮಾಹಿತಿ ನೀಡಿದ್ದಾರೆ.
ಇಬ್ಬರೂ ಕೇರಳ ಮೂಲದವರಾಗಿದ್ದು, ಗೋವಾಕ್ಕೆ ಬೈಕ್ ನಲ್ಲಿಯೇ ತೆರಳಿದ್ದರು. ಬೈಕ್ ನಲ್ಲಿ ಜಾಲಿ ರೈಡ್ ಹೊರಟಿದ್ದವರು ಮಾತ್ರ ಸೇರಿದ್ದು ಮಸಣಕ್ಕೆ. ಹೆಲ್ಮೆಟ್ ಧರಿಸಿದ್ದರೂ ಸಹ ಮೇಲಿನಿಂದ ಕೆಳಗಡೆ ಬಿದ್ದ ರಭಸಕ್ಕೆ ಬೈಕ್ ಸವಾರ ಕೊನೆಯುಸಿರೆಳೆದಿದ್ದಾನೆ. ಹಿಂಬದಿ ಕುಳಿತಿದ್ದವನಿಗೂ ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರು ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.