ಟಿಕೆಟ್ ಗೆ ಮೀಸಲಿಟ್ಟಿದ್ದ ಹಣ ಮೂಗ ಯುವತಿ ವಿವಾಹಕ್ಕೆ ಕೊಟ್ಟ ತೇಜಸ್ವಿ ಪಟೇಲ್...!

ಟಿಕೆಟ್ ಗೆ ಮೀಸಲಿಟ್ಟಿದ್ದ ಹಣ ಮೂಗ ಯುವತಿ ವಿವಾಹಕ್ಕೆ ಕೊಟ್ಟ ತೇಜಸ್ವಿ ಪಟೇಲ್...!
ದಾವಣಗೆರೆ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚನ್ನಗಿರಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ನಿಂದ ಸ್ಪರ್ಧಿಸುವ ಆಸೆ ಹೊಂದಿದ್ದ ಮಾಜಿ ಮುಖ್ಯಮಂತ್ರಿ ಜೆ. ಹೆಚ್. ಪಟೇಲ್ ರ ಸಹೋದರ ಪುತ್ರ, ರಾಜ್ಯ ಕಬ್ಬು ಬೆಳೆಗಾರರ ಸಂಘದ 
ಉಪಾಧ್ಯಕ್ಷ ತೇಜಸ್ವಿ ವಿ. ಪಟೇಲ್ ಅವರು ಕೆಪಿಸಿಸಿಗೆ ಟಿಕೆಟ್ ಪಡೆಯಲು ಅರ್ಜಿ ಸಲ್ಲಿಕೆಗೆ ಮೀಸಲಿಟ್ಟಿದ್ದ 2 ಲಕ್ಷ ರೂಪಾಯಿ.ನ್ನು ಮೂಗ ಯುವತಿಯ ಮದುವೆಗೆ ನೀಡಿದ್ದಾರೆ. ಈ ಮೂಲಕ ಬಡವರಿಗೆ ನೆರವಾಗಬೇಕು ಎಂಬ ಸಂದೇಶ ಸಾರಿದ್ದಾರೆ. 
ಚನ್ನಗಿರಿ ತಾಲೂಕಿನ ಬೆಳಲಗೆರೆ ಗ್ರಾಮದ ಅಖಾಡದ ರಂಗಪ್ಪ ಮತ್ತು ಯಲ್ಲಮ್ಮಗೆ ಒಂದು ಗಂಡು ಸೇರಿ ಆರು ಮಕ್ಕಳು. ಈ ಪೈಕಿ ಒಬ್ಬರನ್ನು ಹೊರತುಪಡಿಸಿದರೆ ಉಳಿದ ಐವರಿಗೂ ವಾಕ್ ದೋಷ ಇದೆ. ತಂದೆ  ರಂಗಪ್ಪ ಹಾಗೂ ಮಗ ಈಗಾಗಲೇ ಸಾವನ್ನಪ್ಪಿದ್ದಾರೆ. ಕೊನೆ ಮಗಳು 27 ವರ್ಷದ ಕೆಂಚಮ್ಮಗೆ ಹರಪನಹಳ್ಳಿ ತಾಲೂಕು ಉಚ್ಚಂಗಿದುರ್ಗ ಸಮೀಪ ವಡ್ಡಳ್ಳಿ ಮಂಜುನಾಥ್ ಎಂಬ ವಾಕ್ ದೋಷ ಇರುವ ಯುವಕನೊಂದಿಗೆ ಸುಮಾರು ಏಳು ಎಂಟು ತಿಂಗಳ ಹಿಂದೆ ವಿವಾಹ ನಿಶ್ಚಯವಾಗಿತ್ತು.
ವಿವಾಹಕ್ಕೆ ತುಂಬಾ ಅಗತ್ಯವಿರುವ ಮಾಂಗಲ್ಯ ಸರ ಮಾಡಿಸಲು ಸುಮಾರು 2 ಲಕ್ಷ ರೂಪಾಯಿ ಹೊಂದಿಸಲು ಈ ಕುಟುಂಬ ತುಂಬಾ ಕಷ್ಟಪಡುತಿತ್ತು. ಈ ಕುಟುಂಬ ಒಮ್ಮೆ ಬೇರೆ ಸಮಸ್ಯೆ ಹೇಳಿಕೊಳ್ಳಲು ತೇಜಸ್ವಿ ಪಟೇಲ್ ರ ಬಳಿ ಬಂದಿದ್ದರು. ಆಗ ವಾಕ್ ದೋಷ ಇರುವ ವಧು - ವರರ ಮದುವೆ ನಿಶ್ಚಯವಾಗಿದೆ ಎಂದು ಕುಟುಂಬದವರು ಹೇಳಿದರು. ಪರಿಶಿಷ್ಟ ಪಂಗಡ ಸಮುದಾಯಕ್ಕೆ ಸೇರಿದವರಾಗಿದ್ದರಿಂದ ಬುಡಕಟ್ಟು ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಅಥವಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳಲಿ ಯಾವುದಾದರೂ ಒಂದು ಇಲಾಖೆ ಯಲ್ಲಿ ಧನ ಸಹಾಯ ಮಾಡಿಸಬಹುದೆಂಬ ಯೋಚನೆಯಿಂದ ಕೆಂಚಮ್ಮನ ಮದುವೆಗೆ ಸರ್ಕಾರದಿಂದ ಹಣ ಕೊಡಿಸುವ ಭರವಸೆಯನ್ನು ತೇಜಸ್ವಿ ವಿ. ಪಟೇಲ್ ನೀಡಿದ್ದರು. 
ಬಳಿಕ ಈ ಇಲಾಖೆಗಳನ್ನು ಸಂಪರ್ಕಿಸಿದಾಗ ಇಂತಹ ಜೋಡಿಗೆ ಯಾವುದೇ ವಿಶೇಷ ಯೋಜನೆ ಇಲ್ಲ ಎಂಬುದು ಗೊತ್ತಾಗಿದೆ. ನನ್ನನ್ನೆೇ ನಂಬಿ ವಿವಾಹಕ್ಕೆ ಸಿದ್ದತೆ ಮಾಡಿಕೊಂಡರುವುದರಿಂದ ಅವರಿಗೆ ಹಣ ವ್ಯವಸ್ಥೆ ಮಾಡುವ ಜವಾಬ್ದಾರಿ ಹೆಚ್ಚಾಯಿತು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚನ್ನಗಿರಿಯಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸಬೇಕೆಂದು ಚನ್ನಗಿರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪಟೇಲ್ ಕುಟುಂಬದ ಅಭಿಮಾನಿಗಳಿಂದ ಒಲವು 
ವ್ಯಕ್ತವಾಗುತ್ತಿರುವ ಪ್ರಯುಕ್ತ ಕಾಂಗ್ರೆಸ್ ಪಕ್ಷದಲ್ಲಿ ಅರ್ಜಿ ಹಾಕಲು ಎಲ್ಲ ಸಿದ್ದತೆ ಮಾಡಿಕೊಂಡಿದ್ದೆ. ಕೆಪಿಸಿಸಿ ಕಚೇರಿಯಲ್ಲಿ 2,ಲಕ್ಷ ಡಿಡಿಯೊಂದಿಗೆ ಅರ್ಜಿ ಹಾಕಬೇಕಿದೆ. ಈ ಮಧ್ಯೆ ಕೆಪಿಸಿಸಿ ಕಚೇರಿಗೆ ಎರಡು ಲಕ್ಷ ತುಂಬಾ ಚಿಕ್ಕ ಮೊತ್ತ. ಅದೇ ಆ ಎರಡು 
ಲಕ್ಷ ರೂಪಾಯಿ ಕೆಂಚಮ್ಮ ಕುಟುಂಬಕ್ಕೆ ನೀಡಿದರೆ ಒಳ್ಳೆಯದಾಗುತ್ತೆ ಎಂಬ ಭಾವನೆಯಿಂದ ಆ ಡಿಡಿಯನ್ನು ನೀಡಿದ್ದೇನೆ ಎಂದು ತೇಜಸ್ವಿ ಪಟೇಲ್ ಹೇಳಿದ್ದಾರೆ. 
ಕೆಂಚಮ್ಮನಿಗೆ ಬಹಿರಂಗ ವೇದಿಕೆಯಲ್ಲಿ ಡಿಡಿ  ಮೂಲಕ ನೀಡಿ ಈ ಡಿಡಿ ಜೆರಾಕ್ಸ್ ಪ್ರತಿಯೊಂದಿಗೆ ಕೆಪಿಸಿಸಿ ಕಚೇರಿಯಲ್ಲಿ ಅರ್ಜಿ ಹಾಕಬೇಕು. ಕೆಂಚಮ್ಮಗೆ ನೀಡಿರುವ ಡಿಡಿ ಕೆಪಿಸಿಸಿ ಕಚೇರಿಗೆ ನೀಡಲಾಗಿದೆ ಎಂದು ಭಾವಿಸಿ ಅರ್ಜಿಯನ್ನು ಪರಿಗಣಿಸುವಂತೆ ಮನವಿ ಮಾಡುವ ಆಲೋಚನೆಯೂ ಇದೆ. ಕೆಂಚಮ್ಮೊಗೆ 2ಲಕ್ಷ ಡಿಡಿ ನೀಡಿದ್ದೇನೆ. ಕೆಪಿಸಿಸಿಯು ನೂತನ ಕಟ್ಟಡ ನಿರ್ಮಿಸಲು ಅರ್ಜಿ ಜೊತಗೆ ಎರಡು ಲಕ್ಷ ಪಡೆಯುತ್ತಿದೆ. ನಾನು ಕೂಡ ಈ ಹಣ ನೀಡುತ್ತಿರುವುದು ಒಂದು ಬಡ ಮಹಿಳೆಯ ಜೀವನ ಕಟ್ಟಲಿಕ್ಕೆ ಆದಂತೆ ಆಗುತ್ತಲ್ಲ ಎನ್ನುವ ಭಾವನೆಯಿಂದ ಈ ನಡೆ ನನ್ನದು. ಕೆಪಿಸಿಸಿ ನನ್ನ ಈ ಆಲೋಚನೆಯನ್ನು ಬೆಂಬಲಿಸಲು ಕೆಂಚಮ್ಮ ನೀಡಿರುವ ಡಿಡಿಯಾ ಜೆರಾಕ್ಸ್ ಪ್ರತಿಯೊಂದಿಗೆ ನನ್ನ ಅರ್ಜಿಯನ್ನು ಸ್ವೀಕರಿಸಬಹುದೆಂಬ ವಿಶ್ವಾಸ ಹೊಂದಿದ್ದೇನೆ. ಕೆಪಿಸಿಸಿ ನನ್ನ ಅಭಿಲಾಷೆಗೆ ಸಹಮತ ವ್ಯಕ್ತಪಡಿಸದಿದ್ದಲ್ಲಿ ದಾವಣಗೆರೆಯಲ್ಲಿ ಅಧಿಕೃತವಾಗಿ  ಡಾ. ಶಾಮನೂರು ಶಿವಶಂಕರಪ್ಪರ ಮೂಲಕ‌ ಡಿಡಿಯನ್ನು ಪುನಃ ನೀಡಲಾಗವುದು. ಆಗ ಕೆಪಿಸಿಸಿಯೇ ಕೆಂಚ್ಚಮ್ಮಗೆ ಹಣ ನೆರವು ನೀಡಿದಂತೆ ಆಗುತ್ತದೆ ಎಂದು  ತೇಜಸ್ವಿ ವಿ. ಪಟೇಲ್ ತಿಳಿಸಿದ್ದಾರೆ.