ಜೆಡಿಎಸ್-ಬಿಜೆಪಿ ಮೈತ್ರಿ, 4 ಕ್ಷೇತ್ರ ಅಂತಿಮ: ಬಿ.ಎಸ್. ಯಡಿಯೂರಪ್ಪ

ಜೆಡಿಎಸ್-ಬಿಜೆಪಿ ಮೈತ್ರಿ, 4  ಕ್ಷೇತ್ರ ಅಂತಿಮ: ಬಿ.ಎಸ್. ಯಡಿಯೂರಪ್ಪ

ಬೆಂಗಳೂರು,ಸೆ.8 : 2024 ರ ಲೋಕಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷವು (ಬಿಜೆಪಿ) ಜನತಾ ದಳ (ಜಾತ್ಯತೀತ) ಜೊತೆ ಮೈತ್ರಿ ಮಾಡಿಕೊಂಡಿದೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಶುಕ್ರವಾರ ಹೇಳಿದ್ದಾರೆ.

ಲೋಕಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಎರಡೂ ಪಕ್ಷಗಳು ಹೊಂದಾಣಿಕೆಯಿಂದ ಎದುರಿಸಲಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿರುವುದು ನನಗೆ ಖುಷಿ ತಂದಿದೆ. ಮೈತ್ರಿ ವಿಚಾರಕ್ಕೆ ಸಂಬಂಸಿ ಉಭಯ ನಾಯಕರು ಈಗಾಗಲೇ 4 ಸ್ಥಾನಗಳನ್ನು ಅಂತಿಮಗೊಳಿಸಿ ದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮೈತ್ರಿ ವಿಚಾರಕ್ಕೆ ಸಂಬಂಸಿ ಇತ್ತೀಚೆಗೆ ದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ಜೊತೆ ಎಚ್.ಡಿ. ದೇವೇಗೌಡ ಅವರು ಮಾತುಕತೆ ನಡೆಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಏತನ್ಮಧ್ಯೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕುರಿತು ಪ್ರತಿಕ್ರಿ ಯಿಸಿರುವ ಕಾಂಗ್ರೆಸ್ ಎಂಎಲ್ಸಿ ಜಗದೀಶ್ ಶೆಟ್ಟರ್, ಎರಡು ಅಸಹಾಯಕ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ ಎಂದು ವ್ಯಂಗ್ಯವಾಡಿದ್ದಾರೆ.

ಸೆ.17 ಕ್ಕೆ ರಾಜ್ಯ ಪ್ರವಾಸಕ್ಕೆ ಚಾಲನೆ: 

ಪಕ್ಷ ಸಂಘಟನೆ ಹಾಗೂ ಲೋಕಸಭೆ ಚುನಾ ವಣೆಗೆ ಸಿದ್ಧತೆಗಾಗಿ ರಾಜ್ಯ ಪ್ರವಾಸ ಕೈಗೊಳ್ಳಲು ಬಿಜೆಪಿ ಮುಂದಾಗಿದೆ.

ಈ ನಿಟ್ಟಿನಲ್ಲಿ ಸೆ.17 ರಂದು ‘ಮೂಡಣ ಬಾಗಿಲು’ ಎಂದೇ ಕರೆಯುವ ಮುಳಬಾಗಿಲು ತಾಲ್ಲೂಕಿನ ಕುರುಡುಮಲೆ ಯಲ್ಲಿ ಗಣೇಶನಿಗೆ ಪೂಜೆ ಸಲ್ಲಿಸಿ ಪ್ರವಾಸಕ್ಕೆ ಚಾಲನೆ ನೀಡಲಾಗುತ್ತಿದೆ. ಈ ಸಂಬಂಧ ಸಿದ್ಧತೆ ನಡೆಸಲು ಶುಕ್ರವಾರ ಖುದ್ದಾಗಿ ಯಡಿಯೂರಪ್ಪ ಅವರು ಸಂಸದ ಎಸ್.ಮುನಿಸ್ವಾಮಿ ಅವರಿಗೆ ದೂರವಾಣಿ ಕರೆ ಮಾಡಿ ಸೂಚನೆ ನೀಡಿದರು.