ಜನಸಂಕಲ್ಪ ವಿಜಯಯಾತ್ರೆಯಾಗ್ತಿದೆ, ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ: ಬಸವರಾಜ್ ಬೊಮ್ಮಾಯಿ ವಿಶ್ವಾಸ

ಜನಸಂಕಲ್ಪ ವಿಜಯಯಾತ್ರೆಯಾಗ್ತಿದೆ, ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ: ಬಸವರಾಜ್ ಬೊಮ್ಮಾಯಿ ವಿಶ್ವಾಸ
ಜನಸಂಕಲ್ಪ ವಿಜಯಯಾತ್ರೆಯಾಗ್ತಿದೆ, ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ: ಬಸವರಾಜ್ ಬೊಮ್ಮಾಯಿ ವಿಶ್ವಾಸ

ದಾವಣಗೆರೆ: ಜನಸಂಕಲ್ಪ ಯಾತ್ರೆ ವಿಜಯಯಾತ್ರೆಯಾಗಿ ಮಾರ್ಪಡುತ್ತಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂಬುದು ರಾಜ್ಯದ ಜನರ ಅಪೇಕ್ಷೆ ಇದೆ ಎಂಬುದು ಗೊತ್ತಾಗುತ್ತಿದೆ.

ಡಬಲ್ ಎಂಜಿನ್ ಸರ್ಕಾರ ಬೇಕು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಜಗಳೂರಿನಲ್ಲಿ ಬಿಜೆಪಿ ಆಯೋಜಿಸಿದ್ದ ಜನ ಸಂಕಲ್ಪ ಯಾತ್ರೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕೆಲ ರಾಜಕೀಯ ನಾಯಕರು ಸುಳ್ಳು ಆಶ್ವಾಸನೆ ಕೊಟ್ಟು ಓಡಾಡುತ್ತಾರೆ.

ಜನರನ್ನು ಮಳ್ಳು ಮಾಡ್ತಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಎಷ್ಟು ಭಾಗ್ಯ ಕೊಟ್ಟಿರಿ. ಅನ್ನ ಭಾಗ್ಯದಲ್ಲಿ ಕನ್ನ ಹಾಕಿದರು. ಎಸ್ಸಿ ಎಸ್ಟಿ ಮಕ್ಕಳ  ದಿಂಬು, ಹಾಸಿಗೆಯಲ್ಲಿ ದುಡ್ಡು ಹೊಡೆದರು.

ದೀನ ದಲಿತರ ಹಕ್ಕು ಮೊಟಕುಗೊಳಿಸಿದರು. ಕಾಂಗ್ರೆಸ್ ನವರಿಗೆ ನಾಚಿಕೆಯಾಗಬೇಕು. ಎಸ್ಸಿ, ಎಸ್ಟಿ ಜನಾಂಗದವರ ಮತ ಕೇಳಲು ಯಾವ ನೈತಿಕ ಹಕ್ಕಿದೆ. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವವರು ಯಾಕೆ ಈ ಸಮುದಾಯಗಳಿಗೆ ನ್ಯಾಯ ಒದಗಿಸಲಿಲ್ಲ ಎಂದು ಪ್ರಶ್ನಿಸಿದರು.  

ಜನರಿಗೆ ಮಾತಿನಿಂದ ನೀರು ಕುಡಿಸಿದುರು. ಮನೆ ಮನೆಗೆ ನೀರು ಸರಬರಾಜು ಮಾಡಲಿಲ್ಲ. ದೊಡ್ಡ ಜನರು ಆಶ್ವಾಸನೆ ಅಷ್ಟೇ ನೀಡಿದ್ದು. ಜನರಿಗಾಗಿ ಕೆಲಸ ಮಾಡುತ್ತಿರುವುದು ಬಿಜೆಪಿ. ನುಡಿದಂತೆ ನಡೆಯುತ್ತಿದ್ದೇವೆ.  ಐದು ವರ್ಷದ ಕಾಂಗ್ರೆಸ್ ಆಡಳಿತಕ್ಕೂ, ಮೂರುವರೆ ವರ್ಷದ ಬಿಜೆಪಿ ನಡೆಸುತ್ತಿರುವ ಅಧಿಕಾರಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಅಹಿಂದ, ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಿದ್ದ ಕಾರಣ ಸಿದ್ದರಾಮಯ್ಯ ಮುಖ್ಯಮಂತ್ರಿ ಆದರು. ಆದ್ರೆ, ಈ ವರ್ಗಕ್ಕೆ ನೀಡಿದ್ದು ಏನು ಇಲ್ಲ. ಇಂಥ ಆಡಳಿತದ ಬಗ್ಗೆ ಜನರು ಭ್ರಮನಿರಸನಗೊಂಡರು. ಈಗಲೂ ಸಹ ಕಾಂಗ್ರೆಸ್ ಬಗ್ಗೆ ಜನರಿಗೆ ಒಲವಿಲ್ಲ ಎಂದು ಹೇಳಿದರು.

ಕೇವಲ ಮತ ಬ್ಯಾಂಕ್ ಗೆ ಮಾತ್ರ ಹಿಂದುಳಿದ ವರ್ಗ ಉಪಯೋಗಿಸಿಕೊಂಡ ಕಾಂಗ್ರೆಸ್ ಗೆ ಯಾವುದೇ ಕಾರಣಕ್ಕೂ ಅಧಿಕಾರ ನೀಡಬಾರದು ಎಂದು ಜನರು ನಿರ್ಧರಿಸಿದ್ದಾರೆ. ಹಿಂದುಳಿದವರ ಬಗ್ಗೆ ಮಾತನಾಡಿದವರು ಮಾತ್ರ ಮುಂದುವರಿದಿದ್ದಾರೆ. ಜನಗಣತಿಗನುಗುಣವಾಗಿ ಮೀಸಲಾತಿ ನೀಡುವಂತೆ ಕೇಳಿದ್ದರೂ ಈ ಹಿಂದಿನ ಯಾವ ಸರ್ಕಾರ ಮಾಡಿರಲಿಲ್ಲ. ಕಾನೂನು ಚೌಕಟ್ಟು ಕೊಟ್ಟು ಎಸ್ಟಿ ಜನಾಂಗಕ್ಕೆ ಶೇ. 3 ರಿಂದ 7 ರಷ್ಟು ಹಾಗೂ ಅಂಬೇಡ್ಕರ್ ಹಾಗೂ ಜಗಜೀವನ್ ಅನುಯಾಯಿಗಳಿಗೆ ಶೇಕಡಾ 15ರಿಂದ 17ಕ್ಕೆ ಮೀಸಲಾತಿ ಹೆಚ್ಚಿಸಿದ್ದು ನಾವು.

ಮುಂಬರುವ ದಿನಗಳಲ್ಲಿ ಬದುಕು ಬದಲಾವಣೆಯಾಗುತ್ತೆ. ಎಸ್ಸಿ, ಎಸ್ಟಿ ಜನಾಂಗಕ್ಕೆ ಜಮೀನಿಲ್ಲ. ದುಡಿಮೆ ಮೇಲೆ ಅವರ ಬದುಕು ಅವಲಂಬಿತ. ಎಲ್ಲಾ ವರ್ಗದ ಜನರಿಗೆ ಸಮಾನವಾದ ಅವಕಾಶ, ಗೌರವ, ಕಾಯಕ, ಶಿಕ್ಷಣ ನೀಡುವ ಸಂಕಲ್ಪ ಬಿಜೆಪಿಯದ್ದು ಎಂದು ತಿಳಿಸಿದರು.

560 ಕೋಟಿ ರೂಪಾಯಿ ವೆಚ್ಚದಲ್ಲಿ 57 ಕೆರೆಗಳಿಗೆ ನೀರುಣಿಸುವ ಯೋಜನೆ ಮಾಡಿದ್ದೇವೆ. ಈ ಮೂಲಕ ಬರಡು ನಾಡನ್ನು ಹಸಿರುಮಯವಾಗಿಸುವ ನಿಟ್ಟಿನಲ್ಲಿ ಹೆಜ್ಜೆ ಇರಿಸಿದ್ದೀವಿ. ಭದ್ರಾ ಮೇಲ್ದಂಡೆ ಯೋಜನೆ ಸಂಪೂರ್ಣವಾಗಿ ಆದರೆ 45 ಸಾವಿರ ಎಕರೆ ಹನಿ ನೀರಾವರಿ ಆಗುತ್ತದೆ.  ಇದಕ್ಕಾಗಿ 1400 ಕೋಟಿ ರೂಪಾಯಿ ಯೋಜನೆಗೆ ಅನುಮೋದನೆ ನೀಡಲಾಗಿದೆ.

ಈಗಾಗಲೇ ಕೆಲಸ ಕಾರ್ಯಗಳಿಗೆ ಚಾಲನೆ ನೀಡಿದ್ದು, ತಯಾರಿ ನಡೆಯುತ್ತಿದೆ. ಈ ಹಿಂದೆ ಅಧಿಕಾರ ನಡೆಸಿದ ಕಾಂಗ್ರೆಸ್ ಗೆ ಯಾಕೆ ಇಚ್ಛಾಶಕ್ತಿ ಇರಲಿಲ್ಲ ಎಂದು ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿ ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿಯೊಂದು ಮನೆಗೂ ಕುಡಿಯುವ ನೀರು ಪೂರೈಸುವ ಯೋಜನೆ ಜಾರಿಯಾಗುತ್ತಿದೆ. 9 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ.  25 ಲಕ್ಷ ಮನೆಗಳಿಗೆ ಕುಡಿಯುವ ನೀರು ನೀಡಬೇಕಿತ್ತು. ಈ ಪೈಕಿ 14 ಲಕ್ಷ ಮನೆಗಳಿಗೆ ಒಂದು ವರ್ಷದಲ್ಲಿ ಬಿಜೆಪಿ ನೀಡಿದೆ.

ಸ್ವಾತಂತ್ರ್ಯ ಬಂದ  75 ವರ್ಷದಲ್ಲಿ 25 ಲಕ್ಷ ಮನೆಗಳಿಗೆ ಮಾತ್ರ ನೀರು ಪೂರೈಕೆ ಇತ್ತು. ಕೇವಲ ಮೂರು ವರ್ಷದಲ್ಲಿ 30 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದೇವೆ. ಇದು ಡಬಲ್ ಇಂಜಿನ್ ಸರ್ಕಾರದ ಪರಿಣಾಮ. 154 ಗ್ರಾಮಗಳಿಗೆ ಸುಮಾರು 482 ಕೋಟಿ ರೂಪಾಯಿ ವೆಚ್ಚದಲ್ಲಿ ಮನೆ ಮನೆಗೆ ನೀರು ಕೊಡುವ ಯೋಜನೆ ರೂಪಿಸಿದ್ದೇವೆ.

ಇದು ನಮ್ಮ ಬದ್ಧತೆ. ಜನಸಾಮಾನ್ಯರಿಗೆ ಆರೋಗ್ಯ
ಇರಬೇಕಾದರೆ ಶುದ್ಧ ಕುಡಿಯುವ ನೀರು ಇರಬೇಕು. ಇಷ್ಟೊಂದು ಪ್ರಮಾಣದಲ್ಲಿ ಎಂದೂ ಆಗಿರಲಿಲ್ಲ. ಅದು ಬಿಜೆಪಿಯಿಂದ ಆಗಿದೆ ಎಂದರು.

ಅಪ್ಪರ್ ಭದ್ರಾಗೆ 3 ಸಾವಿರ ಕೋಟಿ ರೂಪಾಯಿ ನೀಡಿದ್ದೇವೆ. ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿಸಿ 16 ಸಾವಿರ ಕೋಟಿ ರೂಪಾಯಿ ನೀಡುತ್ತಿದೆ. ಚಿತ್ರದುರ್ಗ, ದಾವಣಗೆರೆ, ತುಮಕೂರು, ಸೇರಿದಂತೆ ಮಧ್ಯ ಕರ್ನಾಟಕ ಸಂಪೂರ್ಣ ನೀರಾವರಿಯಾಗುತ್ತದೆ. ಭೂಮಿ ತಾಯಿ ಹಸಿರು ಸಿರಿಯಾಗುತ್ತಾಳೆ. ಭೂಮಿಗೆ ರೈತರ ಬೆವರು ಸೇರಿದರೆ ಬಂಗಾರದ ಬೆಳೆ ಬರುತ್ತದೆ. ಬರಡು ನಾಡಾದ ಮಧ್ಯ ಕರ್ನಾಟಕವನ್ನು ಹಸಿರುನಾಡನ್ನಾಗಿ ಪರಿವರ್ತನೆ ಮಾಡಬೇಕು ಎಂಬುದು ನಮ್ಮ ಸಂಕಲ್ಪ. ಇದು ಈಡೇರುವುದು ಕೇವಲ ಬಿಜೆಪಿಯಿಂದ ಮಾತ್ರ ಎಂದು ಹೇಳಿದರು.


ವೇದಿಕೆಯಲ್ಲಿ ಸಚಿವರಾದ ಬಿ. ಶ್ರೀರಾಮುಲು, ಗೋವಿಂದ ಕಾರಜೋಳ, ಬೈರತಿ ಬಸವರಾಜ್, ಸಂಸದ ಜಿ. ಎಂ. ಸಿದ್ದೇಶ್ವರ್, ಶಾಸಕರಾದ ಎಸ್. ವಿ. ರಾಮಚಂದ್ರ, ಮಾಡಾಳು ವಿರೂಪಾಕ್ಷಪ್ಪ, ಎಂ. ಪಿ. ರೇಣುಕಾಚಾರ್ಯ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಶಿವಯೋಗಿಸ್ವಾಮಿ, ನವೀನ್ ಮತ್ತಿತರರು ಹಾಜರಿದ್ದರು.