ಕ್ರೈಂ ಮಾಡುವವರಿಗೆ ಸಿಂಹಸ್ವಪ್ನವಾಗಿದ್ದ "ತುಂಗಾ" ಇನ್ನು ನೆನಪಷ್ಟೇ...

ಕ್ರೈಂ ಮಾಡುವವರಿಗೆ ಸಿಂಹಸ್ವಪ್ನವಾಗಿದ್ದ "ತುಂಗಾ" ಇನ್ನು ನೆನಪಷ್ಟೇ...
ಕ್ರೈಂ ಮಾಡುವವರಿಗೆ ಸಿಂಹಸ್ವಪ್ನವಾಗಿದ್ದ "ತುಂಗಾ" ಇನ್ನು ನೆನಪಷ್ಟೇ...

ದಾವಣಗೆರೆ: ಪೊಲೀಸ್ ಇಲಾಖೆಯ ಕ್ರೈಂ ಡಾಗ್ ತುಂಗಾ ಕಾಲಿಟ್ಟರೆ ಸಾಕು ಆರೋಪಿಗಳ ಎದೆಯಲ್ಲಿ ಢವಢವ ಶುರುವಾಗುತಿತ್ತು. ಯಾಕೆಂದರೆ ಅಷ್ಟೊಂದು ಚಾಣಾಕ್ಷ, ಚಾಕಚಕ್ಯತೆಯಿಂದ ಆರೋಪಿಗಳನ್ನು ಗುರುತು ಹಿಡಿಯುತಿತ್ತು. ಎಷ್ಟೋ ಪ್ರಕರಣಗಳನ್ನು ಬೇಧಿಸಿ ಶಹಬ್ಬಾಸ್ ಗಿರಿ ಪಡೆದಿತ್ತು. ಕ್ಲಿಷ್ಟಕರ ಕೇಸ್ ಗಳು ಈ ಶ್ವಾನದಿಂದಾಗಿ ಪತ್ತೆಯಾಗಿದ್ದವು. ದೇಶದ ಗಮನ ಸೆಳೆಯುವಂತೆ ಸಾಧನೆ ಮಾಡಿದ್ದ ತುಂಗಾ ಇಂದು ಅನಾರೋಗ್ಯಕ್ಕೆ ಒಳಗಾಗಿ ಮೃತಪಟ್ಟಿದೆ.

ತುಂಗಾಳು ಬಿಳಿರಕ್ತ ಕಣ ಕಡಿಮೆಯಾಗಿತ್ತು. ಆಗಿನಿಂದಲೂ ಸ್ವಲ್ಪ ಸೊರಗಿತ್ತು. ವೈದ್ಯರು ಹೇಳುವ ಪ್ರಕಾರ ಡೆಂಗ್ಯೂ ಕಾಣಿಸಿಕೊಂಡ ಕಾರಣ ಮೃತಪಟ್ಟಿರಬಹುದು. ಆರೋಗ್ಯವಾಗಿಯೇ ಇದ್ದ ತುಂಗಾ ಕಳೆದ ಕೆಲ ದಿನಗಳಿಂದ ಸ್ವಲ್ಪ ಸೊರಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದೆ. ತನ್ನ ಜೀವಿತಾವಧಿಯಲ್ಲಿ ಪೊಲೀಸ್ ಇಲಾಖೆಗೆ ನೀಡಿರುವ ಸೇನೆ ಅನನ್ಯ ಹಾಗೂ ಅತ್ಯದ್ಭುತ.ತುಂಗಾ ಟ್ರ್ಯಾಕ್ ರೆಕಾರ್ಡ್:

ಇದುವರೆಗೆ 650 ಪ್ರಕರಣಗಳಲ್ಲಿ ತುಂಗಾ ಹಾಜರಾತಿ ಹಾಕಿತ್ತು. ಈ ಪೈಕಿ 71 ಕೊಲೆ ಪ್ರಕರಣಗಳು, 35 ಕಳವು ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿತ್ತು. ನಾಲ್ಕು ಪ್ರಕರಣಗಳಲ್ಲಿ ಗಲ್ಲು ಹಾಗೂ 4 ಕೇಸ್ ಗಳಲ್ಲಿ ಆರೋಪಿಗಳಲ್ಲಿ ಜೀವಾವಧಿ ಶಿಕ್ಷೆಯಾಗುವಲ್ಲಿ ಈ ಶ್ವಾನದ ಪಾತ್ರ ಮಹತ್ವದ್ದಾಗಿತ್ತು.ಇಲ್ಲಿಗೆ ಬಂದಿದ್ದು ಯಾವಾಗ..?

2010ರಲ್ಲಿ ಬೆಂಗಳೂರಿನಿಂದ ದಾವಣಗೆರೆಗೆ ತುಂಗಾ ಕರೆದುಕೊಂಡು ಬರಲಾಗಿತ್ತು. 2000 ರಲ್ಲಿ ರೂಬಿ ಕ್ರೈಂ ಡಾಗ್ ಆಗಿ ಬಂದಿತ್ತು. ಸುಮಾರು ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿತ್ತು. ಆದ್ರೆ, ತುಂಗಾ ಬರೋಬ್ಬರಿ ಹನ್ನೆರಡೂವರೆ ವರ್ಷಗಳ ಕಾಲ ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆಗೆ ತನ್ನದೇ ಆದ ಕೊಡುಗೆ ನೀಡಿದೆ. ಹರಿಹರ ಪಟ್ಟಣದಲ್ಲಿ ಅಪ್ರಾಪ್ತ ಬಾಲಕಿ ಹತ್ಯೆಯಾಗಿತ್ತು. ಈ ವೇಳೆ ಕೋಮುಗಲಭೆ ನಡೆಯುವ ಸಾಧ್ಯತೆಯೂ ಹೆಚ್ಚಿತ್ತು. ಆದ್ರೆ, ತುಂಗಾ
ಆರೋಪಿ ಇಮ್ರಾನ್ ಪತ್ತೆ ಮಾಡಿತ್ತು. ಆ ಬಳಿಕ ಅಪರಾಧ ಸಾಬೀತಾದ ಕಾರಣಕ್ಕೆ ಆತನಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿ ಪ್ರಥಮ ದರ್ಜೆ ನ್ಯಾಯಾಲಯ ಶಿಕ್ಷೆ ಪ್ರಕಟಿಸಿತ್ತು. ಇನ್ನು ಹಲವಾಗಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಆರೋಪಿ ಗುರುತು ಹಿಡಿದಿದ್ದೇ ಇದೇ ಶ್ವಾನ ತುಂಗಾ.

ಹೊನ್ನಾಳಿ ರೇಪ್ ಅಂಡ್ ಮರ್ಡರ್, ಚನ್ನಗಿರಿ ತಾಲೂಕಿನ ಸೂಳೆಕೆರೆ ಗುಡ್ಡದಲ್ಲಿ ನಡೆದಿದ್ದ ಶೂಟೌಟ್ ಪ್ರಕರಣ, ದಾವಣಗೆರೆಯ ಬೇತೂರಿನಲ್ಲಿ ನಡೆದಿದ್ದ ವೃದ್ಧ ದಂಪತಿ ಪ್ರಕರಣ ಸೇರಿದಂತೆ 71 ಕೊಲೆ ಪ್ರಕರಣ ಬೇಧಿಸಲು ಪೊಲೀಸರಿಗೆ ಸಹಾಯ ಮಾಡಿದ ಕೀರ್ತಿಗೆ ಈ ಶ್ವಾನಕ್ಕೆ ಸಲ್ಲುತ್ತದೆ. ಕರ್ನಾಟಕ ರಾಜ್ಯದಲ್ಲಿ ಶ್ವಾನವೊಂದು ಇಷ್ಟೊಂದು ಪ್ರಕರಣಗಳಲ್ಲಿ ಆರೋಪಿಗಳನ್ನು ಗುರುತು ಹಿಡಿದಿರುವುದು ಇದೇ ಮೊದಲು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇನ್ನು ತುಂಗಾ ಸ್ವಾಮಿನಿಷ್ಠೆ ಹೊಂದಿತ್ತು. 2365 ವಾಸನೆಗಳನ್ನು ಗ್ರಹಿಸುವ ಶಕ್ತಿ ಶ್ವಾನಗಳಿಗೆ ಇರುತ್ತದೆ ಎಂದು ಹೇಳಲಾಗುತ್ತದೆ. ಆದ್ರೆ, ಈ ಶ್ವಾನ ಮಾತ್ರ ಹ್ಯಾಂಡ್ಲರ್ ಹೇಳಿದ ಹಾಗೆ ಕೇಳುತ್ತದೆ. ಬೆಳಿಗ್ಗೆ 5.30 ಕ್ಕೆ ಶ್ವಾನಕ್ಕೆ ತರಬೇತಿ ನೀಡಲಾಗುತಿತ್ತು. ಮಾತ್ರವಲ್ಲ, ತನ್ನ ಅದ್ಭುತ ಕಾರ್ಯವೈಖರಿಗೆ ಸಾಕಷ್ಟು ಪ್ರಶಸ್ತಿಗಳನ್ನು ಗಳಿಸಿಕೊಂಡಿತ್ತು.

ತುಂಗಾ ಅಂದರೆ ನಮಗೆ ತುಂಬಾನೇ ಅಚ್ಚುಮೆಚ್ಚು. ಆದ್ರೆ, ಅನಾರೋಗ್ಯದಿಂದ ಸಾವು ಕಂಡಿದ್ದು ತುಂಬಾ ಬೇಸರ ತರಿಸುತ್ತದೆ. ಈ ತಳಿಯ ಶ್ವಾನ ಸುಮಾರು 12 ವರ್ಷಗಳ ಕಾಲ ಬದುಕಬಹುದು. ಇದು ಇನ್ನು ಮೂರ್ನಾಲ್ಕು ತಿಂಗಳು ಕಳೆದಿದ್ದರೆ 13ನೇ ವರ್ಷಕ್ಕೆ ಕಾಲಿಡುತಿತ್ತು. ಇಲ್ಲ ಎಂದು ಊಹಿಸಿಕೊಳ್ಳುವುದೇ ಕಷ್ಟವಾಗುತ್ತದೆ. ಇಂಥ ಸಾಧನೆ ಮಾಡಿದ ತುಂಗಾ ಮನೆಮಗಳಂತಿದ್ದಳು. ಪೊಲೀಸ್ ಇಲಾಖೆಗೂ ಸಾಕಷ್ಟು ನೆರವು ನೀಡಿದೆ. ಇಲ್ಲ ಎಂಬುದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ತುಂಗಾ ನೋಡಿಕೊಳ್ಳುತ್ತಿದ್ದ ಪೊಲೀಸ್ ಡಾಗ್ ಸ್ಕ್ವಾಡ್ ನ ಕೆ. ಎಂ. ಪ್ರಕಾಶ್ ಹೇಳುತ್ತಾರೆ.