ಕೊಳೆತು ಹೋದ ತರಕಾರಿ, ಹುಳ ಹಿಡಿದಿರುವ ಟೊಮೊಟೊ, ನವಿಲು ಕೋಸು, ಮುಳಗಾಯಿ, ಗಂಧವೇ ಇಲ್ಲದ ಬೇಳೆ

ಹಾಸ್ಟೆಲ್ ನ ಅವ್ಯವಸ್ಥೆಯ ಕೆಲ ಸ್ಯಾಂಪಲ್ ಅಷ್ಟೇ...!

ಕೊಳೆತು ಹೋದ ತರಕಾರಿ, ಹುಳ ಹಿಡಿದಿರುವ ಟೊಮೊಟೊ, ನವಿಲು ಕೋಸು, ಮುಳಗಾಯಿ, ಗಂಧವೇ ಇಲ್ಲದ ಬೇಳೆ
ದಾವಣಗೆರೆ: ತರಕಾರಿ ಕೊಳೆತು ಹೋಗಿವೆ, ಬೇಳೆ ಬೂಸ್ಟ್ ಬಂದಿದೆ. ಟೊಮೊಟೊ, ನವಿಲು ಕೋಸು, ಮುಳಗಾಯಿ ಕೊಳೆತು ಹೋಗಿವೆ. ತರಕಾರಿಯಲ್ಲಿ ಹುಳ ಆಡುತ್ತಿವೆ. ಬೇಳೆಯಲ್ಲಿ ದಿನಿಯಾ ಬಿಟ್ಟರೆ ಏನೂ ಇಲ್ಲ. ನೀವು ಮನೆಯಲ್ಲಿ ಬಳಸುವ ಬೇಳೆ ಹಿಂಗೆ ಇರುತ್ತಾ? ಬೇಳೆಯಲ್ಲಿ ಗಂಧವೂ ಇಲ್ಲ, ಸುಹಾಸನೆಯೂ ಇಲ್ಲ. ಧಾನ್ಯ ಹಾಗೂ ತರಕಾರಿ ಪೂರೈಕೆ ಮಾಡಿರುವುದನ್ನು ಪರಿಶೀಲನೆ ಮಾಡಿದವರು ಯಾರು? ಮಕ್ಕಳು ಇದನ್ನು ತಿನ್ನಲು ಸಾಧ್ಯನಾ...? 
ಇದು ಮಾಯಕೊಂಡದ ಮೊರಾರ್ಜಿ ವಸತಿ ಶಾಲೆಗೆ ಭೇಟಿ ನೀಡಿದ ಮಾಯಕೊಂಡ ಶಾಸಕ ಕೆ. ಎಸ್. ಬಸವಂತಪ್ಪ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪರಿ. 38ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥರಾದ ಹಿನ್ನೆಲೆಯಲ್ಲಿ ಹಾಸ್ಟೆಲ್ ಗೆ ಬಸವಂತಪ್ಪರು ಭೇಟಿ ನೀಡುತ್ತಿದ್ದಂತೆ ಅವ್ಯವಸ್ಥೆಗಳೇ ಕಣ್ಮುಂದೆ ಬಂದವು. ತಹಶೀಲ್ದಾರ್ ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆ ಭೇಟಿ ನೀಡಿದ ಬಸವಂತಪ್ಪ ಅವರು, ಹಾಸ್ಟೆಲ್ ನ ದುಃಸ್ಥಿತಿಗೆ ಆಕ್ರೋಶ ವ್ಯಕ್ತಪಡಿಸಿದರು. 
ತಾಲೂಕು ಆರೋಗ್ಯಾಧಿಕಾರಿಗಳು ಸರಿಯಾಗಿ ಪರಿಶೀಲನೆ ನಡೆಸಿಲ್ಲ. ಇಲ್ಲಿಗೆ ಭೇಟಿ ನೀಡಿ ಯಾವ ರೀತಿ ಇದೆ ಎಂದು ನೋಡಿದ್ದರೆ ಈ ಸಮಸ್ಯೆ ಆಗುತ್ತಿರಲಿಲ್ಲ. ಬೇಳೆ, ತರಕಾರಿ ಸೇರಿದಂತೆ ಇತರೆ ಆಹಾರ ಧಾನ್ಯಗಳನ್ನು ಪರಿಶೀಲಿಸಿದ ಶಾಸಕರು, ಅಧಿಕಾರಿಗಳಿಗೆ ಇದರ ವಾಸನೆ ನೋಡಿ ಎಂದ್ರು. ಮಾತ್ರವಲ್ಲ, ಹುಳ ಹಿಡಿದಿದ್ದ ತರಕಾರಿ ತೋರಿಸಿ ನೋಡಿ ಇಂಥದ್ದನ್ನು ಮಕ್ಕಳು ಸೇವಿಸಲು ಆಗುತ್ತಾ? ಹಾಸ್ಟೆಲ್ ವಾರ್ಡನ್ ಬದಲಾವಣೆ ಮಾಡಿ ಎಂದು ಹೇಳಿದ್ದರೂ ಇದುವರೆಗೆ ಕ್ರಮ ಆಗಿಲ್ಲ. ಯಾಕೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 
ಮೊದಲು ಹಾಸ್ಟೆಲ್ ವಾರ್ಡನ್ ವಿರುದ್ಧ ಕ್ರಮ ಆಗಲೇಬೇಕು. ಕೂಡಲೇ ಸಸ್ಪೆಂಡ್ ಮಾಡಿ ಎಂದು ಶಾಸಕರು ಹೇಳುತ್ತಿದ್ದಂತೆ ಸ್ಥಳದಲ್ಲಿದ್ದವರು ಇದರಲ್ಲಿ ಯಾವ ರಾಜಕೀಯವೂ ಬೇಡ. ವಾರ್ಡನ್ ಹಾಗೂ ಸಿಬ್ಬಂದಿಯನ್ನು ಬದಲಾಯಿಸಿ ಎಂದು ಹೇಳಿದರು. ಅಧಿಕಾರಿಗಳು ಸಹ ಕೊಳೆತು ಹೋದ ತರಕಾರಿ, ಧಾನ್ಯಗಳು ಹಾಗೂ ಅವ್ಯವಸ್ಥೆಯನ್ನು ನೋಡಿದರಲ್ಲದೇ, ಸೂಕ್ತ ಕ್ರಮದ ಭರವಸೆ ನೀಡಿದರು. 
ಬೇಳೆಯಲ್ಲಿ ಗಂಧವೂ ಇಲ್ಲ, ಸುವಾಸನೆಯನೂ ಇಲ್ಲ. ಅಧಿಕಾರಿಗಳು ತಮ್ಮ ಮನೆಗೆ ಖರೀದಿಸಿಕೊಂಡು ಹೋಗುವ ಬೇಳೆ ಘಮ ಘಮ ಎನ್ನುತ್ತದೆ. ಮಕ್ಕಳು ಸೇವಿಸುವ ಈ ಬೆೇಳೆ ನೋಡಿದರೆ ದನಿಯಾ ಬಿಟ್ಟರೆ ಏನೂ ಇಲ್ಲ. ಮಸಾಲೆ ಪದಾರ್ಥವೂ 
ಸರಿಯಿಲ್ಲ. ಈ ರೀತಿಯಾದ ಅಡುಗೆ ಮಾಡಿದರೆ ಮಕ್ಕಳು ಸೇವಿಸುವುದಾದರೂ ಹೇಗೆ? 150 ಮಕ್ಕಳು ಇಲ್ಲಿದ್ದಾರೆ. ಕೇವಲ 4 ಕೆಜಿ ಬೇಳೆ ತಿಂಗಳಿಗೆ ಸಾಕಾಗುತ್ತಾ? ಅಥವಾ ಒಂದು ದಿನಕ್ಕೆ ಸಾಕಾ? ಸರ್ಕಾರ ಎಲ್ಲಾ ರೀತಿಯ ನೆರವು ನೀಡುತ್ತಿದೆ. ಮಕ್ಕಳ ವಸತಿ, ಉಟೋಪಾಚಾರಕ್ಕೆ ಹಣ ಖರ್ಚು ಮಾಡುತ್ತದೆ. ಇಲ್ಲಿಗೆ ಪೂರೈಕೆ ಮಾಡುವವರ ವಿರುದ್ಧವೂ ಕ್ರಮ ಕೈಗೊಳ್ಳಿ ಎಂದು ಶಾಸಕರು ಸೂಚನೆ ನೀಡಿದರು. 
ಹಾಸ್ಟೆಲ್ ನಲ್ಲಿನ ವ್ಯವಸ್ಥೆ ನೋಡಿದ ಬಳಿಕ ಅಸಮಾಧಾನ ವ್ಯಕ್ತಪಡಿಸಿದ ಬಸವಂತಪ್ಪ ಅವರು, ಹಾಸ್ಟೆಲ್ ಶುಚಿಯಾಗಿರಬೇಕು. ಗುಣಮಟ್ಟದ ಆಹಾರಧಾನ್ಯಗಳು, ತರಕಾರಿ ಬೆಳೆಸಬೇಕು. ಫ್ರೆಶ್ ಆದ ತರಕಾರಿ ಉಪಯೋಗಿಸಲು ಏನಾಗಿದೆ? ಇನ್ನು ಮುಂದೆ ಈ ರೀತಿಯ ಅವ್ಯವಸ್ಥೆ ಕಂಡು ಬಂದರೆ ಸಹಿಸುವ ಪ್ರಶ್ನೆಯೇ ಇಲ್ಲ. ತಹಶೀಲ್ದಾರ್, ತಾಲೂಕು ಆರೋಗ್ಯಾಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಸ್ಟೆಲ್ ಗಳಿಗೆ ಭೇಟಿ ನೀಡಿ ಆಗಾಗ್ಗೆ ಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಿದರು. 
38 ಮಕ್ಕಳು ಅಸ್ವಸ್ಥ: 
ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ 38 ಮಕ್ಕಳು ಅಸ್ವಸ್ಥರಾಗಿದ್ದು, ಈ ಪೈಕಿ 15 ವಿದ್ಯಾರ್ಥಿಗಳನ್ನು ದಾವಣಗೆರೆ ಸಿಜೆ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕರೆದುಕೊಂಡು ಬರಲಾಗಿದೆ. 
ಹಾಸ್ಟೆಲ್ ನಲ್ಲಿನ ಕುಡಿಯುವ ನೀರು ಕುಡಿಯಲು ಯೋಗ್ಯವಲ್ಲ ಎಂಬ ವರದಿ ಬಂದಿದೆ. ವಿದ್ಯಾರ್ಥಿನಿಯರು ಅಸ್ವಸ್ಥರಾದ ವಿಷಯ ತಿಳಿಯುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಇಲ್ಲಿನ ಕುಡಿಯಲು ನೀರು ಯೋಗ್ಯವಾಗಿದೆಯೋ ಅಥವಾ ಇಲ್ಲವೋ ಎಂಬ ಕುರಿತಂತೆ ನೀರಿನ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದರು. ವರದಿ ಬಂದಿದ್ದು, ಕುಡಿಯಲು ನೀರು ಯೋಗ್ಯವಾಗಿಲ್ಲ ಎಂಬ ವರದಿ ಬಂದಿದೆ. ಜೊತೆಗೆ ಫುಡ್ ಪಾಯಿಸನ್ ಆಗಿರುವುದೂ ಸಹ ಗೊತ್ತಾಗಿದ್ದು, ಈ ಎರಡು ಕಾರಣಗಳಿಂದ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ ಎಂದು ತಿಳಿದು ಬಂದಿದೆ. 
ಸರ್ಕಾರಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಪ್ರತಿಭಾನ್ವಿತ ಬಾಲಕಿಯರ ಪ್ರೌಢಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದಾರೆ. ಹೂಕೋಸಿನ ಸಾಂಬಾರು ಮಾಡಲಾಗಿತ್ತು. ರಾತ್ರಿ ಈ ಸಾಂಬಾರು ಹಾಗೂ ಅನ್ನ ಊಟ ಮಾಡಿದ್ದರು. ಕಳೆದ ಭಾನುವಾರ ಚಿಕನ್ ಸಾಂಬಾರು ಮಾಡಲಾಗಿತ್ತು. ಆ ಸಾಂಬಾರನ್ನು ಅಂದು ಮತ್ತು ಮಾರನೇ ದಿನವೂ ವಿದ್ಯಾರ್ಥಿಗಳು ಸೇವಿಸಿದ್ದರು. ಜೊತೆಗೆ ರಾತ್ರಿ ಮಾಡಿದ್ದ ಹೂಕೋಸಿನ ಸಾಂಬಾರು ಹಾಗೂ ಬೆಳಿಗ್ಗೆ ಪುಳಿಯೊಗರೆ ಸೇವಿಸಿದ್ದ ವಿದ್ಯಾರ್ಥಿಗಳು ಇದ್ದಕ್ಕಿದ್ದಂತೆ ವಾಂತಿ, ಬೇಧಿ ಮಾಡಿಕೊಳ್ಳಲು ಶುರು ಮಾಡಿದರು. ತೀವ್ರ ತರನಾಗಿ ಸುಸ್ತಾದರು. ಸದ್ಯಕ್ಕೆ ಆರು ವಿದ್ಯಾರ್ಥಿಗಳನ್ನು ದಾವಣಗೆರೆಯ ಸಿ. ಜೆ. ಆಸ್ಪತ್ರೆಗೆ ‘ಹೆಚ್ಚಿನ ಚಿಕಿತ್ಸೆಗೆ ಕರೆದುಕೊಂಡು ಬರಲಾಗಿದೆ. 
ಉಳಿದ 32 ವಿದ್ಯಾರ್ಥಿಗಳಿಗೆ ಮಾಯಕೊಂಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರೂ ಚೇತರಿಸಿತೊಂಡಿದ್ದು, ಯಾವುದೇ ಅಪಾಯ ಇಲ್ಲ. ವಿಷಾಹಾರ ಹಾಗೂ ನೀರು ಸೇವನೆ ಕಾರಣದಿಂದ ವಿದ್ಯಾರ್ಥಿಗಳು ಸುಸ್ತಾಗಿದ್ದಾರೆ. ಸದ್ಯಕ್ಕೆ ಚಿಕಿತ್ಸೆ ನೀಡಲಾಗಿದ್ದು, ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ. ಆರು ವಿದ್ಯಾರ್ಥಿಗಳು ಮಾತ್ರ ತೀವ್ರವಾಗಿ ಸುಸ್ತಾದ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ದಾವಣಗೆರೆಯ ಸಿ. ಜೆ. ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಈ ವಿದ್ಯಾರ್ಥಿಗಳು ಸಹ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.