ಕಾಲೇಜು ಶಿಕ್ಷಣದಿಂದ ವಿದ್ಯಾರ್ಥಿಯ ಬದುಕು ನಿರ್ಧಾರ

ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪೊ. ರಾಜಶೇಖರ್ ಹೆಬ್ಬಾರ್

ಕಾಲೇಜು ಶಿಕ್ಷಣದಿಂದ ವಿದ್ಯಾರ್ಥಿಯ ಬದುಕು ನಿರ್ಧಾರ

ಶಿವಮೊಗ್ಗ: ವಿದ್ಯಾರ್ಥಿಗಳು ಕಾಲೇಜಿನಲ್ಲಿನ ತರಗತಿಗಳನ್ನು  ಸರಿಯಾಗಿ ಬಳಸಿಕೊಂಡು, ಗುರುಗಳ ಮಾರ್ಗದರ್ಶನದಲ್ಲಿ  ನಡೆದರೆ ಬದುಕನ್ನು ಉತ್ತಮ ರೀತಿಯಲ್ಲಿ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಕಾಲೇಜು ಶಿಕ್ಷಣ ವಿದ್ಯಾರ್ಥಿಯ ಬದುಕಿನ ಗತಿಯನ್ನು ನಿರ್ಧರಿಸುತ್ತದೆ ಎಂದು  ಕಾಲೇಜು ಶಿಕ್ಷಣ ಇಲಾಖೆಯ ಶಿವಮೊಗ್ಗ ಪ್ರಾದೇಶಿಕ ಕಚೇರಿಯ ಜಂಟಿ ನಿದೇರ್ಶಕ ಪೊ. ರಾಜಶೇಖರ್ ಹೆಬ್ಬಾರ್ ಹೇಳಿದರು. 

ಇಲ್ಲಿನ ಎಟಿಎನ್‌ಸಿಸಿ ಕಾಲೇಜಿನಲ್ಲಿ  ಸಂವಿಧಾನ ದಿನಾಚರಣೆ ನಿಮಿತ್ತ ಗುರುವಾರ ಏರ್ಪಡಿಸಲಾಗಿದ್ದ ಸಂವಿಧಾನ ಕುರಿತಾದ ಉಪನ್ಯಾಸ ಕಾರ್‍ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ಮಾನವ ಸಂಪನ್ಮೂಲದಲ್ಲಿ ಅತ್ಯಂತ ಮುಂದುವರೆದ ದೇಶ. ಶೇ. ೬೪ರಷ್ಟು ಯುವಜನತೆಯನ್ನು ಹೊಂದಿದ, ಉತ್ತಮ ಭವಿಷ್ಯವಿರುವ ದೇಶ. ಆದ್ದರಿಂದ  ಶಿಕ್ಷಣದ ಮೂಲಕ ಮುಂದೆ ಬರಬೇಕು. ಭವ್ಯ ಭವಿಷ್ಯವನ್ನು ಕಟ್ಟಿಕೊಳ್ಳಬೇಕು ಎಂದರು. 

 ಪ್ರಪಂಚದ ಯಾವುದೇ ಮೂಲೆಗೆ ನಮ್ಮನ್ನು ಬಿಸಾಡಿದರೂ ಬದುಕನ್ನು ಕಟ್ಟಿಕೊಳ್ಳುವ ಶಕ್ತಿಯನ್ನು  ಶಿಕ್ಷಣ ನಮಗೆ ನೀಡುತ್ತದೆ. ಆದ್ದರಿಂದ ಶಿಕ್ಷಣವಂತರಾಗಿ ಸಾಧನೆ ಮಾಡಬೇಕು. ಸುಂಸ್ಕೃತರಾಗಬೇಕು. ಸಾಧನೆ ಇಲ್ಲದೆ ವ್ಯಕ್ತಿ ಸಾಯಬಾರದು. ಬದುಕಿನಲ್ಲಿ ಕಲಿಯುವುದು ಹೆಚ್ಚಿದೆ.  ನಾವು ನಮ್ಮ ನೆಲ, ಜಲ, ಮಣ್ಣಿಗೆ ಗೌರವ ಕೊಡಬೇಕು.  ಭವ್ಯ ಭಾರತದ ಪ್ರಜೆಯಾಗಬೇಕು. ಭೌತಿಕ ಜನ್ಮವನ್ನು ತಂದೆ-ತಾಯಿ ಕೊಡುತ್ತಾರೆ. ಆದರೆ ಬೌದ್ಧಿಕ ಜನ್ಮವನ್ನು ಕೊಡುವ ಶಿಕ್ಷಕರನ್ನು ಗೌರವದಿಂದ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕೆಂದರು.

ಕಾಲೇಜು ಶಿಕ್ಷಣ ಇಲಾಖೆಯ ವಿಶೇಷ ಅಧಿಕಾರಿ ಬಸವರಾಜ ಮಾತನಾಡಿ,  ಮತದಾನ ಬಂದ ನಂತರ ವಿದ್ಯಾರ್ಥಿಗಳಲ್ಲಿ ಸಂವಿಧಾನದ ಅರಿವು ಮೂಡುತ್ತದೆ. ಸಂವಿಧಾನದ ನೆಲೆಯಲ್ಲಿ ನಾವು ಬದುಕಬೇಕು. ಸಂವಿಧಾನವನ್ನು ಯಾವ ಆಶೋತ್ತರದ ಹಿನ್ನೆಲೆಯಲ್ಲಿ ರಚಿಸಿದ್ದಾರೋ ಅದನ್ನು ಈಡೇರಿಸಬೇಕು. ಅದಕ್ಕೆ ಗೌರವ ಕೊಡುವವರಾಗಬೇಕೆಂದರು.

 ಆನಂತರ ಉಪನ್ಯಾಸವನ್ನು ಮಂಗಳೂರಿನ ಪ್ರೊ. ಅನಂತಕೃಷ್ಣ ಭಟ್ ನಡೆಸಿಕೊಟ್ಟರು. ಅಧ್ಯಕ್ಷತೆಯನ್ನು ಕಾಲೇಜು ಪ್ರಾಚಾರ್‍ಯ ಪ್ರೊ.  ಎಚ್.ಎಸ್. ಸುರೇಶ್ ವಹಿಸಿದ್ದರು. ಪ್ರಾಸ್ತಾವಿಕವಾಗಿ ಕಾಲೇಜಿನ ಐಕ್ಯುಎಸಿ ಅಧಿಕಾರಿ ಪ್ರೊ. ಖಾಜಿಮ್ ಶರೀಫ್ ಮಾತನಾಡಿ, ಅತಿಥಿಗಳನ್ನು ಪರಿಚಯಿಸಿದರು. ದೈಹಿಕ ನಿರ್ದೇಶಕ ಪ್ರೊ. ಕೆ. ಎಂ.  ನಾಗರಾಜ ಸ್ವಾಗತಿಸಿದರು.