ಎಸ್ ಎಸ್ ಕುಟುಂಬದ ಮೇಲಿನ ಅಭಿಮಾನಕ್ಕೆ ಬಂದಿದ್ದೇನೆ: ಡಿ‌. ಕೆ. ಶಿವಕುಮಾರ್

ಎಸ್ ಎಸ್ ಕುಟುಂಬದ ಮೇಲಿನ ಅಭಿಮಾನಕ್ಕೆ ಬಂದಿದ್ದೇನೆ: ಡಿ‌. ಕೆ. ಶಿವಕುಮಾರ್
ದಾವಣಗೆರೆ: ಡಾ. ಶಾಮನೂರು ಶಿವಶಂಕರಪ್ಪ ಕುಟುಂಬದ ಋಣ ನನ್ನ ಮೇಲಿದೆ. ಹಾರ, ತುರಾಯಿ, ಜೈಕಾರ ಹಾಕಿಸಿಕೊಳ್ಳಲು ಇಲ್ಲಿಗೆ ಬಂದಿಲ್ಲ. ವಿಧಾನಸೌಧದಲ್ಲಿ ಅಧಿವೇಶನ ನಡೆಯುತ್ತಿದ್ದರೂ ಬಿಟ್ಟು ಬಂದಿದ್ದೇನೆ. ಇದಕ್ಕೆ ಅವರ ಮೇಲಿನ ಅಭಿಮಾನ, ಪ್ರೀತಿ ಕಾರಣ. ಶಾಮನೂರು ಶಿವಶಂಕರಪ್ಪರು ನನಗೆ ಮಾರ್ಗದರ್ಶಕರು. ಮಲ್ಲಿಕಾರ್ಜುನ್ ಜನುಮ ದಿನದಲ್ಲಿ ಪಾಲ್ಗೊಂಡಿದ್ದು ನನ್ನ ಭಾಗ್ಯ. 2023ರ ಚುನಾವಣೆಯಲ್ಲಿ ಮತ್ತೆ ವಿಧಾನಸೌಧದಲ್ಲಿ ಮಲ್ಲಿಕಾರ್ಜುನ್ ಕೂರುವಂತಾಗಬೇಕು‌‌. ಇದಕ್ಕೆ ನಿಮ್ಮ ಆಶೀರ್ವಾದ ಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿದರು‌.
ನಗರದ ಬಾಪೂಜಿ ಎಂಬಿಎ ಗ್ರೌಂಡ್ ನಲ್ಲಿ ಎಸ್ ಎಸ್ ಎಂ ಅಭಿಮಾನಿಗಳ ಬಳಗ ಆಯೋಜಿಸಿದ್ದ ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಹುಟ್ಟುಹಬ್ಬ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, 
ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದೀರಿ. ನಾವು 50 ಎಂಎಲ್ ಎ ಬರುವವರಿದ್ದೆವು. ಆದ್ರೆ ಸದನದಲ್ಲಿ ಶೇ. 40ರಷ್ಟು ಕಮೀಷನ್ ಪಡೆಯುವ ಭ್ರಷ್ಟ ಸರ್ಕಾರದ ಬಗ್ಗೆ ಚರ್ಚಿಸಲು ಸ್ಪೀಕರ್ ಅವಕಾಶ ಕೊಟ್ಟ ಕಾರಣ ನಾವು ನಾಲ್ವರು ಅಷ್ಟೇ ಹೆಲಿಕ್ಯಾಪ್ಟರ್ ನಲ್ಲಿ ಬಂದಿದ್ದೇವೆ. ಬೆಂಗಳೂರಿನಲ್ಲಿ ಸಭೆ ಇವೆ. ಭಾರತ್ ಜೋಡೊ ಯಾತ್ರೆ ಬಗ್ಗೆ ಚರ್ಚೆ ನಡೆಸಬೇಕಾಗಿದೆ. ಕಾರ್ಯಕ್ರಮಕ್ಕೆ ಬರಲೇಬೇಕು ಎಂಬ ಕಾರಣಕ್ಕೆ ಬಂದಿದ್ದೇನೆ. ಸಿದ್ದರಾಮಯ್ಯ ಅವರು ಪ್ರತಿಪಕ್ಷ ನಾಯಕರಾಗಿ ಭ್ರಷ್ಟ ಸರ್ಕಾರದ ವಿರುದ್ಧ ಮಾತನಾಡಬೇಕು. ಹಾಗಾಗಿ ಬರಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು‌.
ಎಸ್. ಎಂ. ಕೃಷ್ಣ ಹಾಗೂ ಸಿದ್ದರಾಮಯ್ಯ ಸಂಪುಟದಲ್ಲಿ ನಾನು ಹಾಗೂ ಮಲ್ಲಿಕಾರ್ಜುನ್ ಕೆಲಸ ಮಾಡಿದ್ದೇವೆ.  ಕ್ಯಾಬಿನೆಟ್ ನಲ್ಲಿ ತಂದೆ - ಮಗನ ಚಿಂತೆ ದಾವಣಗೆರೆ ಜಿಲ್ಲೆಯ ಬದುಕು, ಬದಲಾವಣೆ, ಅಭಿವೃದ್ಧಿ ಅಷ್ಟೇ. ಇಷ್ಟೊಂದ ಸಂಖ್ಯೆಯಲ್ಲಿ ಆಗಮಿಸಿರುವ ಎಸ್ ಎಸ್ ಎಂ ಅಭಿಮಾನಿ ಬಳಗಕ್ಕೆ ನನ್ನ ಸಾಷ್ಟಾಂಗ ನಮಸ್ಕಾರ ಎಂದು ಹೇಳಿದರು‌.
ಪ್ರಧಾನಿ ನರೇಂದ್ರ ಮೋದಿ ಉಚಿತವಾಗಿ ವ್ಯಾಕ್ಸಿನ್ ನೀಡದೇ ಹೋದಾಗ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ವ್ಯಾಕ್ಸಿನ್ ನೀಡಿ ಜಿಲ್ಲೆಯ ಜನರ ಜೀವ ಉಳಿಸಿದ್ದು ಶಾಮನೂರು ಶಿವಶಂಕರಪ್ಪ ಹಾಗೂ ಮಲ್ಲಿಕಾರ್ಜುನ್. ಇದೊಂದು ದಾಖಲೆ. ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಹುಟ್ಟು ಸಾವಿನ ನಡುವೆ ಏನ್ ಮಾಡ್ತಾರೆ ಎಂಬುದು ಮುಖ್ಯ. ದಾವಣಗೆರೆ ನಗರ ಹಾಗೂ ಜಿಲ್ಲೆಗೆ ಉದ್ಯೋಗ, ವಿದ್ಯೆ, ವ್ಯಾಪಾರ, ವಹಿವಾಟು ಶಕ್ತಿ ಬಂದಿದೆ ಎಂದರೆ ಶಾಮನೂರು ಶಿವಶಂಕರಪ್ಪರ ಪರಿಶ್ರಮ ಇದರಲ್ಲಿ ಅಡಗಿದೆ ಎಂದು ಹೇಳಿದರು‌. 
ಕಳೆದ ವಿಧಾನಸಭೆ ಚುನಾವಣೆಯಲ್ಲಿ ದಾವಣಗೆರೆ ಉತ್ತರ ಕ್ಷೇತ್ರದ ಜನರು ಕಾರಣಾಂತರದಿಂದ ಮಲ್ಲಿಕಾರ್ಜುನ್ ಕೈಹಿಡಿಯಲಿಲ್ಲ. ಇದರಿಂದ ನಿಮಗೆ  ಲಾಭ ಆಗಿದೆಯಾ ಎಂದು ಪ್ರಶ್ನಿಸಿದ ಅವರು, ಮೋದಿ ನೀಡಿದ ಭರವಸೆಯಂತೆ ಉದ್ಯೋಗ ಸಿಕ್ಕಿದೆಯಾ, 15 ಲಕ್ಷ ರೂ. ಬಂದಿದೆಯಾ? ಗ್ಯಾಸ್ ಸಬ್ಸಿಡಿ ನಿಮ್ಮ ಅಕೌಂಟ್ ಗೆ 1 ಸಾವಿರ ಬಂದಿದೆಯಾ? ಯಾಕೆ ಮಲ್ಲಿಕಾರ್ಜುನ್ ಅವರನ್ನು ಸೋಲಿಸಿದೆವು, ಈ ಮೂಲಕ ಆತ್ಮವಂಚನೆ ಮಾಡಿಕೊಂಡೆವು ಎಂಬ ಬಗ್ಗೆ ಜನರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಸರ್ಕಾರ ಮಾಡ್ಲಿಕ್ಕೆ ಆಗದ ಕೆಲಸಗಳು ಶಾಮನೂರು ಕುಟುಂಬ ಮಾಡಿದೆ. ಇವರು ಮಾಡಿರುವ ಸೇವೆ, ಮಾನವೀಯತೆ ಯಾರೂ ಮರೆಯಲು ಸಾಧ್ಯವಿಲ್ಲ. ದೇಶದಲ್ಲಿ ದೊಡ್ಡ ಗಾಳಿ ಶುರುವಾಗುತ್ತಿದೆ. ರಾಜ್ಯದಲ್ಲಿನ ಭ್ರಷ್ಟ ಸರ್ಕಾರ ತೊಲಗಿಸಬೇಕು. ಪಕ್ಕದ ಜಿಲ್ಲೆ ಚಿತ್ರದುರ್ಗದ ಮೂಲಕ ಭಾರತ್ ಜೋಡೊ ಹೋಗುತ್ತೆ. 510 ಕಿಲೋಮೀಟರ್ ರಾಜ್ಯದಲ್ಲಿ ಯಾತ್ರೆ ನಡೆಯುತ್ತದೆ. ಭಾರತ್ ಜೋಡೊಗೆ ಪ್ರತಿಯೊಬ್ಬರೂ ಹೆಜ್ಜೆ ಹಾಕಬೇಕು. ಜಿಲ್ಲೆಯ ಜವಾಬ್ದಾರಿಯನ್ನು ಮಲ್ಲಿಕಾರ್ಜುನ್ ಹಾಗೂ ಪಕ್ಷದ ಜಿಲ್ಲಾಧ್ಯಕ್ಷರಿಗೆ ವಹಿಸಿದ್ದೇವೆ. ಪ್ರತಿಯೊಬ್ಬರ ಹೆಜ್ಜೆ, ದೇಶಕ್ಕೊಂದು ಕೊಡುಗೆ ಎಂದು ತಿಳಿಸಿದರು‌.
ಮಲ್ಲಿಕಾರ್ಜುನ್ ಅವರಿಗೆ ದೇವರು ಆರೋಗ್ಯ ಕೊಡಲಿ. ಅಧಿಕಾರ ಸಿಗುವಂತಾಗಲಿ. ವಿಧಾನಸೌಧದಲ್ಲಿ ಕುಳಿತುಕೊಳ್ಳುವಂತಾಗಬೇಕು. ನೀವೆಲ್ಲರೂ ಆಶೀರ್ವದಿಸಿ ಎಂದು ಮನವಿ ಮಾಡಿದರು‌.
ವೇದಿಕೆಯಲ್ಲಿ ಶಾಸಕರಾದ ಶಾಮನೂರು ಶಿವಶಂಕರಪ್ಪ, ಡಾ. ಯತೀಂದ್ರ ಸಿದ್ದರಾಮಯ್ಯ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ್, ಮಾಜಿ ಸಚಿವರಾದ ಹೆಚ್. ಆಂಜನೇಯ, ಶಾಸಕ ರಾಮಪ್ಪ, ಮಾಜಿ ಶಾಸಕ ಡಿ. ಬಿ. ಶಾಂತನಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್. ಬಿ. ಮಂಜಪ್ಪ, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್, ಹುಲ್ಲುಮನಿ ಗಣೇಶ್ ಮತ್ತಿತರರು ಹಾಜರಿದ್ದರು‌.
ವೇದಿಕೆಗೆ ಡಿ. ಕೆ. ಶಿವಕುಮಾರ್ ಭಾಷಣ ಶುರು ಮಾಡುತ್ತಿದ್ದಂತೆ ಡಿ ಬಾಸ್ ಎಂಬ ಘೋಷಣೆ ಕೂಗಿದವರಿಗೆ ವಾರ್ನ್ ಮಾಡಿದ ಘಟನೆಯೂ ನಡೆಯಿತು.
ಸುಮ್ಮನಿದ್ದರೆ ಇರುತ್ತೇನೆ, ಮಾತಾಡ್ತೇನೆ, ಇಲ್ಲಾಂದ್ರೆ ಹೋಗ್ತೇನೆ. ಡಿ. ಕೆ. ಬಾಸು ಬೇಡ, ಡಿ ಬಾಸು ಬೇಡ, ಸೆಷನ್ ಬಿಟ್ಟು‌ ಬಂದಿದ್ದೇನೆ. ಸುಮ್ಮನಿರಿ, ಮಾತನಾಡುವುದನ್ನು ಕೇಳಿಸಿಕೊಳ್ಳಿ‌. ಐದು ನಿಮಿಷ ಸುಮ್ಮನಿರಲು ಆಗಲ್ವಾ ಎಂದು ಗದರಿದರು‌.