ಎ.ಟಿ.ಎನ್.ಸಿ ಕಾಲೇಜು : ಪ್ರತಿಭಾ ಪುರಸ್ಕಾರ

ಸಂಸ್ಕಾರ ಬದುಕಿನ ಅವಿಭಾಜ್ಯ ಅಂಗವಾಗಲಿ : ಜಿ.ಎಸ್.ನಾರಾಯಣರಾವ್

ಎ.ಟಿ.ಎನ್.ಸಿ ಕಾಲೇಜು : ಪ್ರತಿಭಾ ಪುರಸ್ಕಾರ

ಶಿವಮೊಗ್ಗ : ಸಂಸ್ಕಾರ ಮತ್ತು‌ ಸಂಸ್ಕೃತಿ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಲಿ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್ ಅಭಿಪ್ರಾಯಪಟ್ಟರು

ಶನಿವಾರ ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಸಾಂಸ್ಕೃತಿಕ ಮತ್ತು ಕ್ರೀಡಾ ವಿಭಾಗದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಂಪ್ರದಾಯಿಕ ದಿನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು

ಸಾಂಪ್ರದಾಯಿಕ ದಿನಗಳು ಒಂದು ದಿನದ ಸೀಮಿತವಾಗಬಾರದು. ಭಾರತ ನಿಂತಿರುವುದೇ ಸಂಸ್ಕಾರ ಸಂಸ್ಕೃತಿಯ ಆಧಾರದ ಮೇಲೆ. ಹಿರಿಯರನ್ನು ಕಂಡಾಗ ಕಾಲಿಗೆ ಬೀಳುವುದು ಸಂಸ್ಕಾರ. ಪದವಿಯ ಮೇಲೆ ಪದವಿಯಗಳಿಸಿದರೂ ಕಲಿಸಿದ ಗುರುಗಳಿಗೆ ನಮ್ರತೆಯ ವಂದನೆ ತೋರುವುದು ಸಂಸ್ಕಾರ. ಇದರೊಂದಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಸಂಸ್ಕೃತಿಯು ಕಲಿಕೆಯ ಅವಶ್ಯಕವಾಗಲಿ.

ದೈನಂದಿನ ಬದುಕಿನಲ್ಲಿ ನಾವು ತಪ್ಪು ಮಾಡಿದರೆ ವಕೀಲರಂತೆ ವಾದ ಮಾಡುತ್ತೇವೆ, ಇನ್ನಿತರರು ತಪ್ಪು ಮಾಡಿದರೆ ನ್ಯಾಯಾಧೀಶರಂತೆ ವರ್ತಿಸುತ್ತೇವೆ. ಅಂತಹ‌ ವರ್ತನೆಗಳಿಂದ ದೂರಾಗಬೇಕಿದೆ. ಒಂಟಿಯಾಗಿರುವಾಗ ನಮ್ಮ ಆಲೋಚನೆಗಳ ಮೇಲೆ ಹಿಡಿತವಿರಬೇಕು, ಗುಂಪಿನಲ್ಲಿರುವಾಗ ಮಾತಿನ ಮೇಲೆ ಹಿಡಿತವಿರಬೇಕು ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕರಾದ ಸೀತಾಲಕ್ಷ್ಮೀ ಮಾತನಾಡಿ ಆಧುನಿಕತೆಯ ನಡುವೆ ಮೂಲ ಸಾಂಸ್ಕೃತಿಕ ಚಿಂತನೆ ಕಣ್ಮರೆಯಾಗುತ್ತಿದೆ. ಹಾಗಾಗಿಯೇ ಇಂದಿನ ದಿನಮಾನಕ್ಕೆ ತಕ್ಕಂತೆ ಎಲ್ಲಾ ಕಾಲಕ್ಕೂ ಒಪ್ಪುವ ಸಂಸ್ಕಾರಯುತ ಮೌಲ್ಯಗಳು ನಮಗೆ ಸಿಗುವಂತಾಗಲಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಹೆಚ್.ಎಂ.ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಎಸ್.ಎಸ್.ವಾಗೀಶ್, ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಪ್ರೊ.ಕೆ.ಎಂ.ನಾಗರಾಜ, ಐಕ್ಯೂಎಸಿ ಸಂಚಾಲಕರಾದ ಕಾಜೀಂ ಶರೀಫ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.