ಆವಿಷ್ಕಾರಿ ಕೃಷಿ ಪದ್ದತಿಗಳಿಗೆ 6ಜಿ ತಂತ್ರಜ್ಞಾನ ಪೂರಕ

ಜೆ.ಎನ್.ಎನ್.ಸಿ.ಇ : ಇಸ್ರೋ ಮಾಜಿ ಅಧ್ಯಕ್ಷ ಕಿರಣ್ ಕುಮಾರ್

ಆವಿಷ್ಕಾರಿ ಕೃಷಿ ಪದ್ದತಿಗಳಿಗೆ 6ಜಿ ತಂತ್ರಜ್ಞಾನ ಪೂರಕ
ಶಿವಮೊಗ್ಗ : ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಭಾರತ ಉನ್ನತ ಸ್ಥಾನದಲ್ಲಿದ್ದು 6ಜಿ ಸಂವಹನಗಳ ಮೂಲಕ ಆವಿಷ್ಕಾರಿ ಕೃಷಿ ಪದ್ದತಿಗಳನ್ನು ಅನುಷ್ಟಾನಗೊಳಿಸಲು ಪೂರಕವಾಗಲಿದೆ ಎಂದು ಇಸ್ರೋ ಸಂಸ್ಥೆಯ ಮಾಜಿ ಅಧ್ಯಕ್ಷ ಡಾ.ಎ.ಎಸ್.ಕಿರಣ್ ಕುಮಾರ್ ಅಭಿಪ್ರಾಯಪಟ್ಟರು.
ಸೋಮವಾರ ನಗರದ ಜೆ.ಎನ್.ಎನ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಐಸಿಟಿಇ ಅಟಲ್ ಹಾಗೂ ಎಲೆಕ್ಟ್ರಾನಿಕ್ಸ್‌ ಅಂಡ್‌ ಟೆಲಿಕಮ್ಯುನಿಕೇಷನ್‌ ಎಂಜಿನಿಯರಿಂಗ್‌ ವಿಭಾಗದ ವತಿಯಿಂದ ಉಪನ್ಯಾಸಕರಿಗಾಗಿ ಏರ್ಪಡಿಸಿದ್ದ ಒಂದು ವಾರಗಳ ಇಂಟರ್ನೆಟ್‌ ಆಫ್‌ ವೆಹಿಕಲ್‌ ಹಾಗೂ 5ಜಿ,6ಜಿ ಸಂವಹನ ಕುರಿತ ರಾಷ್ಟ್ರ ಮಟ್ಟದ ಕಾರ್ಯಾಗಾರವನ್ನು ಆನ್ಲೈನ್ ಮೂಲಕ ಉದ್ದೇಶಿಸಿ ಮಾತನಾಡಿದರು.
ಇಸ್ರೋ ಸಂಸ್ಥೆಯು 6ಜಿ ಕ್ಷೇತ್ರದಲ್ಲಿ ಅನೇಕ ಪ್ರಯೋಗಗಳನ್ನು ನಡೆಸುತ್ತಿದ್ದು, ಭಾರತದ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಪ್ರತಿ ಹದಿನೈದು ನಿಮಿಷಕ್ಕೆ ಕೇವಲ ಏಳು ಸೆಟಲೈಟ್ ಮೂಲಕ ಸಂಪೂರ್ಣ ಭಾರತದ ಮಾಹಿತಿ ಪಡೆಯಬಹುದಾಗಿದೆ. ಮೀನುಗಾರಿಕೆಯ ಸಂದರ್ಭದಲ್ಲಿ ಎದುರಾಗುವ ಹವಮಾನ ವೈಪರೀತ್ಯಗಳು ಹಾಗೂ ಸಮುದ್ರದಲ್ಲಿನ ಹೆಚ್ಚು ಮೀನುಗಳು ಸಿಗಬಹುದಾದ ಪ್ರದೇಶಗಳನ್ನು ಗುರುತಿಸಲು ಬಾಹ್ಯಾಕಾಶ ಸಂವಹನಗಳ ಮೂಲಕ ಸಾಧ್ಯವಾಗುತ್ತಿದೆ. ರೈಲ್ವೆ ಕ್ಷೇತ್ರದಲ್ಲಿನ ಅನೇಕ ಆವಿಷ್ಕಾರಿ ಬದಲಾವಣೆಗಳಿಗೆ  ಬಾಹ್ಯಾಕಾಶ ಸಂಶೋಧನೆ ಕಾರಣವಾಗಿದೆ.
ಭಾರತ ತಾಂತ್ರಿಕ ಪ್ರಯೋಗಗಳ ಹೆಬ್ಬಾಗಿಲು. ನಮ್ಮ ದೇಶ ಖಗೋಳ ಸಮಭಾಜಕದ ಮಧ್ಯ ಭಾಗದಲ್ಲಿರುವುದರಿಂದ ಇಂತಹ ಅನೇಕ ತಾಂತ್ರಿಕ ಪ್ರಯೋಗ ನಡೆಸಲು ಸಾಧ್ಯವಾಗಿದ್ದು, ಇಂತಹ ಅದ್ಭುತತೆಯನ್ನು ಮೊದಲು ತೋರಿಸಿಕೊಟ್ಟವರು ವಿಕ್ರಮ್ ಸಾರಾಭಾಯಿ ಎಂದು ಸ್ಮರಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಇಸ್ರೋ ಸಂಶೋಧನಾ ವಿಜ್ಞಾನಿ ಡಾ.ಡಿ.ವಿವೇಕಾನಂದ ಮಾತನಾಡಿ ನಮ್ಮ ಯುವ ಸಮೂಹ ಹೊಸತನದ ಚಿಂತನೆಯೆಡೆಗೆ ಸಾಗಬೇಕಿದೆ. ಕೇವಲ ಉದ್ಯೋಗವಕಾಶಗಳನ್ನು ಪಡೆಯುವ ಪ್ರಯತ್ನಗಳಿಗಿಂತ, ಸಂಶೋಧನಾ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುವ ಉತ್ಸುಕತೆ ಬೇಕಾಗಿದೆ. ಅಂತಹ ಉತ್ಸುಕತೆ ಪಡೆಯಲು ಎ.ಪಿ.ಜಿ ಅಬ್ದುಲ್ ಕಲಾಂ ರಂತಹ ವ್ಯಕ್ತಿತ್ವಗಳು ಸದಾ ಆದರ್ಶ ಮಾರ್ಗದರ್ಶಕರಾಗಿದ್ದಾರೆ ಎಂದು ಹೇಳಿದರು.
ಬೆಂಗಳೂರಿನ ವಿದ್ಯಾ ಸಂಘದ ಸಿಇಓ ಡಾ.ಎ.ಟಿ.ಕಿಶೋರ್‌ ಕುಮಾರ್‌ ಮಾತನಾಡಿ, ಪ್ರತಿಯೊಂದು ತಾಂತ್ರಿಕ ಪ್ರಯೋಗಗಳಿಗೆ ಗಣಿತ ಮೂಲ ಬೇರಾಗಿದೆ. ನಮ್ಮ ಪೂರ್ವಜರು ಗಣಿತದಲ್ಲಿ ಅಸಾಧಾರಣ ಪಾಂಡಿತ್ಯ ಪಡೆದಿದ್ದರು. ಅವರು ಕೊಟ್ಟ ಕೊಡುಗೆಯಾದ ಸೊನ್ನೆ  ಮೂಲಕ ಅದ್ಭುತ ಆವಿಷ್ಕಾರಗಳನ್ನು ನಡೆಸಲು ಸಾಧ್ಯವಾಯಿತು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್‌.ನಾರಾಯಣ ರಾವ್‌, ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ, ಸಹ ಕಾರ್ಯದರ್ಶಿಗಳಾದ ಡಾ.ಪಿ.ನಾರಾಯಣ್‌, ಪ್ರಾಂಶುಪಾಲರಾದ ಡಾ.ಕೆ.ನಾಗೇಂದ್ರ ಪ್ರಸಾದ್‌, ಶೈಕ್ಷಣಿಕ ಡೀನ್‌ ಡಾ.ಪಿ.ಮಂಜುನಾಥ, ಇಟಿಇ ವಿಭಾಗದ ಮುಖ್ಯಸ್ಥರಾದ ಡಾ.ಎಸ್.ಸುರೇಂದ್ರ, ಕಾರ್ಯಕ್ರಮ ಸಂಯೋಜಕರಾದ ಡಾ.ಎಂ.ಬಿ.ಉಷಾದೇವಿ, ಮಧುಸೂದನ್.ಜಿ, ಆನಂದರಾಜ್, ಪ್ರದೀಪ್.ಎಸ್.ಸಿ, ಪ್ರೇಮ.ಕೆ.ಎನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.